ಬಂಗಾಳೀ ಸಾಹಿತ್ಯ
ಬಂಗಾಳೀ ಭಾಷೆಯ ಇತಿಹಾಸದಲ್ಲಿ ಅದಕ್ಕೆ ಸಾಹಿತ್ಯಿಕ ಅಂತಸ್ತು ಬಂದದ್ದು ತೀರ ವರ್ಷಗಳಲ್ಲಿ-ಅದೂ ಕಳೆದ ನೂರು ವರ್ಷಗಳ ಅವಧಿಯಲ್ಲಿ. ಮುಖ್ಯವಾಗಿ ಇಂಗ್ಲೆಂಡ್ ಮತ್ತು ಯೂರೋಪ್ ದೇಶಗಳ ನವೋನ್ಮೇಷ ಸತ್ತ್ವದ ಜೊತೆ ಸಂಪರ್ಕ, ಮತ್ತು ಸಹವರ್ತನೆ ಒದಗಿದುದರ ಫಲವಾಗಿ ಸಾಹಿತ್ಯಕ್ಷೇತ್ರದಲ್ಲಿ ಬಂಗಾಳೀ ಭಾಷೆಯ ಅಂತಸ್ತು ಅಭಿವರ್ಧಿಸಿತು, ಇಂಗ್ಲಿಷ್ ಜೊತೆ ಸಂಪರ್ಕ, ಒದಗುವುದಕ್ಕಿಂತ ಹಿಂದೆ ಅಂದರೆ ಕ್ರಿ.ಶ. 1800ಕ್ಕೂ ಹಿಂದೆ, ಉನ್ನತಮಟ್ಟದ ಸಾಹಿತ್ಯವೊಂದಿತ್ತು. ಸಾಕಷ್ಟು ವ್ಯಾಪಕವಾಗಿದ್ದು ಈ ಸಾಹಿತ್ಯವನ್ನು ಸೃಷ್ಟಿಸಿದವರು ಹಲವಾರು ಉದ್ಧಾಮ ಕವಿಗಳು: ಚಂಡೀದಾಸ ಕೃತ್ತಿವಾಸ, ವಿಪ್ರದಾಸ, ಪಿಪಲಾಯಿ, ಮಾಲಾಧರ ವಸು, ಲೋಚನ ದಾಸ, ಜ್ಞಾನದಾಸ, ಕವಿಕಂಕಣ ಮುಕುಂದರಾಮ, ಕೃಷ್ಣದಾಸ ಕವಿರಾಜ, ರೂಪ ರಾಮ ಚಕ್ರವರ್ತಿ, ಕಾಶೀರಾಮದಾಸ, ಭಾರತಚಂದ್ರರಾಯ ಗುಣಾಕರ, ಆದರೂ ಬಂಗಾಳೀ ಸಾಹಿತ್ಯ ತನ್ನ ಅಸ್ತಿತ್ವ ಸ್ಥಾಪಿಸಿದ್ದು 19 ಮತ್ತು 20ನೆಯ ಶತಮಾನಗಳ ಲೇಖಕರಾದ ಬಂಕಿಮ್‍ಚಂದ್ರ ಚಟರ್ಜಿ, ಮೈಕೇಲ್ ಮಧುಸೂದನದತ್ತ, ರವೀಂದ್ರನಾಥ ಠಾಕೂರ್, ಶರತ್‍ಚಂದ್ರ ಚಟರ್ಜಿ ಮತ್ತು ಇವರ ಸಮಕಾಲೀನರ ಹಾಗೂ ಅನುಯಾಯಿಗಳ ಕೊಡುಗೆಗಳಿಂದ.

ಇಂಡೋ-ಆರ್ಯನ್ ಭಾಷಾವರ್ಗಗಳ ಪೈಕಿ ಒಂದಾದ ಬಂಗಾಳೀ ಭಾಷೆ ಸ್ವತಂತ್ರ ಭಾಷೆಯಾಗಿ ಸುಮಾರು ಸಾವಿರ ವರ್ಷಗಳ ಅಸ್ತಿತ್ವ ಪಡೆದಿದೆ. ಕವನ ಕಟ್ಟಲು ಮತ್ತು ಗೀತ ಹಾಡಲು ಇದು ವಿಶೇಷವಾಗಿ ಅಳವಡುತ್ತದೆ. ಕವಿತೆ, ಕಾದಂಬರಿ, ನಾಟಕ ಮತ್ತು ಪ್ರಬಂಧ ಪ್ರಕಾರಗಳು ಈ ಭಾಷೆಯ ಪ್ರಧಾನ ಕೃಷಿಕ್ಷೇತ್ರಗಳು. ವಿದ್ಯಾವಂತ ಬಂಗಾಳಿಗಳು ವಿಧಿಯಲ್ಲಿದೆ ಇಂಗ್ಲಿಷನ್ನು ವಿಶ್ವವಿದ್ಯಾಲಯಗಳಲ್ಲಿ ಉನ್ನತ ಅಧ್ಯಯನದ ಭಾಷೆಯಾಗಿ ಬಳಸುತ್ತಾರೆ. ಹೀಗಾಗಿ ಬಂಗಾಳಿಯಲ್ಲಿ ವೈಜ್ಞಾನಿಕ ಹಾಗೂ ತಂತ್ರವಿದ್ಯಾತ್ಮಕ ಅಭಿವರ್ಧಿಸಿರುವುದಿಲ್ಲ. ಪ್ರಾಚೀನ ಹಸ್ತಪ್ರತಿಗಳನ್ನು ಈಗ ಸಹ ಪತ್ತೆ ಆಗುತ್ತಿರುವುದರಿಂದಲೂ ವಿದ್ವಾಂಸರು ಹಳೆಯ ಪಾಠದ ಪುನಃ ಪರಿಶೀಲಿಸುತ್ತಿರುವುದರಿಂದಲೂ ಬಂಗಾಳೀ ಸಾಹಿತ್ಯದ ಪೂರ್ಣ ಇತಿಹಾಸವನ್ನು ಬರೆಯುವುದು ಇನ್ನೂ ಸಾಧ್ಯವಾಗಿಲ್ಲ. ಬಂಗಾಳೀ ಸಾಹಿತ್ಯದ ಪೂರ್ಣ ಇತಿಹಾಸವನ್ನು ಬರೆಯುವುದು ಇನ್ನೂ ಸಾಧ್ಯವಾಗಿಲ್ಲ. ಬಂಗಾಳೀ ಲಿಪಿ ರಾಷ್ಟ್ರೀಯ ಲೇಖನ ಪದ್ಧತಿಯ ಒಂದು ಭಿನ್ನರೂಪ, (ರಾಷ್ಟ್ರೀಯ ಲೇಖನ ಪದ್ಧತಿಯು ಒಂದು ಪ್ರಾತಿನಿಧಿಕ ರೂಪವಾದ ದೇವನಾಗರಿ ಅಥವಾ ನಾಗರಿ ಲಿಪಿಯಲ್ಲಿ ಹಿಂದಿಯನ್ನು ಬರೆಯಲಾಗುತ್ತಿದೆ. ಕಳದೆ ಒಂದು ಶತಮಾನದ ಅವಧಿಯಲ್ಲಿ ಕ್ರಮೇಣ ಇದೇ ಸಂಸ್ಕøತದ ಲಿಪಿಯಾಗಿ ಭಾರತಾದ್ಯಂತ ಅಂಗೀಕೃತವಾಗಿದೆ).

ಬಂಗಾಳೀ ಭಾಷೆಯ ವ್ಯಾಕರಣ ರಚಿಸಿ ಬಂಗಾಳದ ಹೂಗ್ಲಿಯಲ್ಲಿ ಮುದ್ರಿಸಿದ ಇಂಗ್ಲೆಂಡಿನ ನಥೇನಿಯಲ್ ಬ್ರಾಸ್ಸೀ ಹಾಲ್‍ಹೆಡ್ ಎಂಬಾತನಿಗಾಗಿ 1778ರಲ್ಲಿ ಮೊದಲಬಾರಿಗೆ ಬಂಗಾಳೀ ಲಿಪಿಯ ಅಚ್ಚಿನ ಮೊಳೆಗಳನ್ನು ತಯಾರಿಸಲಾಯಿತು. 1800ಕ್ಕೆ ಮುಂಚೆ ಬಂಗಾಳೀ ಸಾಹಿತ್ಯವನ್ನೆಲ್ಲ ಕಾಗದದ ಮೇಲೋ ಓಲೆಗರಿಯ ಮೇಲೋ ಬರೆದು ಕರಡು ಪ್ರತಿಗಳು ಹೆಚ್ಚುಕಾಲ ಉಳಿಯುತ್ತಿರಲಿಲ್ಲ. ಜನಪ್ರಿಯ ಗ್ರಂಥಗಳನ್ನು ಪುನಃಪುನಃ ನಕಲು ಮಾಡಬೇಕಾಗುತ್ತಿತ್ತು. ಇದರಿಂದಾಗಿ ಹಲವಾರು ತಪ್ಪುಗಳು ನುಸುಳುತ್ತಿದ್ದುವು. ಗ್ರಂಥಗಳಲ್ಲಿ ಪ್ರಾಚೀನ ಪದ ಪ್ರಯೋಗಗಳಿದ್ದು ನಕಲು ಮಾಡುವವನಿಗೆ ಅವು ಅರ್ಥವಾಗದಿದ್ದ ಸಂದರ್ಭಗಳಲ್ಲಿ ಆತ ಅವನ್ನು ಆಧುನಿಕ ರೂಪಕ್ಕೆ ತಿದ್ದುತ್ತಿದ್ದ. ಅನೇಕ ವೇಳೆ ಪ್ರತೀಕಾರ ಅಲಂಕಾರಕ್ಕಾಗಿ ತನ್ನ ರಚನೆಗಳನ್ನು ಸೇರಿಸುತ್ತಿದ್ದ. ಹೀಗಾಗಿ ಮೂಲಪಾಠ ಶುದ್ಧವಾಗಿರಿಸಬೇಕೆಂಬ ಸಂಪ್ರದಾಯ ನಿರ್ದಿಷ್ಟವಾಗಿ ಪಾಲಿತವಾಗಲಿಲ್ಲ. ಅನೇಕ ವೇಳೆ ನಕಲಿನ ಪಾಠ ವಿಶ್ವಾಸಾರ್ಹವೂ ಆಗುತ್ತಿರಲಿಲ್ಲ.

ಕಾಗದ ಪತ್ರಗಳ ಕಡತಗಳಲ್ಲಿ ವಿನಾ ಮಿಕ್ಕಡೆಗಳಲ್ಲಿ ಗದ್ಯ ಇಲ್ಲ. (ಈ ಸಂಪ್ರದಾಯ ಇಲ್ಲಿಯ ತನಕ ನಡೆದು ಬಂದಿದೆ_ಈ ಆಡಂಬರ ಶೈಲಿಯ ಪದ್ಯಗಳು ಬಂಗಾಳಿಯಲ್ಲಿ ರಚಿತವಾಗಿರುವ ಹೋಮಿಯೋಪತಿ ದರ್ಪಣ ಮತ್ತು ಮೊಕ್ತಾರ್ ಸುಹೃದ್ (ವಕೀಲರ ಸ್ನೇಹಿತ) ಮುಂತಾದ ಗ್ರಂಥಗಳಲ್ಲಿ ಕಾಣಬಹುದು). ಆರಂಭದ ಬಂಗಾಳೀ ಸಾಹಿತ್ಯದಲ್ಲಿ ಕಥನ ಕವನಗಳು ಮತ್ತು ಭಾವಗೀತೆಗಳು ಪ್ರಮುಖವಾದವು.

ಕಥನಕವನಗಳು ಸಂಸ್ಕøತದ ರಾಮಾಯಣ, ಮಹಾಭಾರತ, ಪುರಾಣಗಳು ಅರ್ಧ ಐತಿಹಾಸಿಕವಾಗಿರುವ ಅದ್ಭುತ ಪ್ರಸಂಗಗಳು ಮುಂತಾದವನ್ನು ನಿರೂಪಿಸುತ್ತವೆ. ಕ್ರಿ.ಶ. ಹದಿನಾರನೆಯ ಶತಮಾನಕ್ಕೆ ಬರುವಾಗ ವೈಷ್ಣವ ಭಕ್ತ ಮತ್ತು ಸಮಾಜ ಸುಧಾರಕ ಚೈತನ್ಯನನ್ನೂ ಆತನ ಶಿಷ್ಯರನ್ನೂ ಕುರಿತ ಜೀವನ ಚರಿತ್ರೆಗಳು ಕಾಣಬರುತ್ತವೆ. ಈ ಕಥೆಗಳು ಬೇಸರ ಹಿಡಿಯುವಷ್ಟು ಪದೇಪದೇ ಪುನರಾವರ್ತನೆಗೊಂಡಿವೆಯಾದರೂ ಇವುಗಳಲ್ಲಿಯ ಮನಮುಟ್ಟವ ಸೂಕ್ಷ್ಮ ಭಾವ ಪ್ರದರ್ಶನ, ಸದ್ದರ್ಶನ, ಮತ್ತು ಮರುಕ ಹುಟ್ಟಿಸುವ ಸಾಮಥ್ರ್ಯ ಪಡೆದಿವೆ. ಹಾಸ್ಯ ಹಾಗೂ ವಿಕಟ ವೈಚಿತ್ರ್ಯ ಕಾಣುವ ಕುಶಲ ದೃಷ್ಟಿ ಜತೆಗೆ ಪ್ರಭುತ್ವ ಹಾಗೂ ನೈಜ ರಸಪ್ರಜ್ಞೆಗಳು ಗೋಚರಿಸುತ್ತವೆ.

ಕರ್ಣಾಟಕ ಮತ್ತು ಬಂಗಾಳ: ಬಂಗಾಳೀ ಭಾಷೆ ಮತ್ತು ಸಂಸ್ಕøತಿಗಳು ರೂಪಗೊಳ್ಳುತ್ತಿದ್ದ ಕಾಲದಲ್ಲಿ ಕರ್ಣಾಟಕಕ್ಕೂ (ಮತ್ತು ದಕ್ಕನ್ ಹಾಗೂ ದಕ್ಷಿಣ ಭಾರತಕ್ಕೂ) ಗೌಡ-ವಂಗಕ್ಕೂ ಒದಗಿದ ಕೆಲವು ಸಂಪರ್ಕಗಳನ್ನು ಹೇಳಿದರೆ ಕನ್ನಡ ಭಾಷೆ ಆಡುವ ಜನರ ಕುತೂಹಲ ಕೆರಳಿತು. ಕ್ರಿ.ಶ. ಹನ್ನೆರಡನೆಯ ಶತಮಾನ ಕನ್ನಡಿಗರ ಪ್ರಭಾವ ಬಂಗಾಳದ ಮೇಲೂ ಬಂಗಾಳದ ಪ್ರಭಾವ ದಕ್ಕನ್ನಿನ ಮೇಲೂ ಬಲಿಷ್ಠ ಚಕ್ರವರ್ತಿ ಎನಿಸಿದ ರಾಜೇಂದ್ರಚೋಳ ಉತ್ತರ ಇಂಡಿಯವನ್ನು ಆಕ್ರಮಿಸಿ ಪಶ್ಚಿಮ ಬಂಗಾಳದವರೆಗೂ ಹೋಗಿ ಅಲ್ಲಿಯ ಕೆಲವು ಸ್ಥಳೀಯ ಬಂಗಾಳೀ ಅರಸರನ್ನು ಗೆದ್ದ. ಇನ್ನೊಂದು ಕೊಳ್ಳೆ ಹೊಡೆಯುವ ದಿಗ್ವಿಜಯವಾಗಿತ್ತು. ಪಶ್ಚಿಮ ಬಂಗಾಳದ ಬಿಂಕೂರ ಮುಂತಾದ ಕೆಲವು ಜಿಲ್ಲೆಗಳಲ್ಲಿ ಕೆಲವು ಮಾದರಿಯ ವೀರಗಲ್ಲುಗಳು ಅಥವಾ ನೆಟ್ಟಗೆ ನಿಲ್ಲಿಸಿರುವ ಶಿಲಾಫಲಕಗಳು ಇವೆ. ಇವು ಸಾಹಸ ಕಾರ್ಯಗಳನ್ನು ಯುದ್ಧರಂಗದಲ್ಲಿ ಪ್ರದರ್ಶಿಸಿ ಮಡಿದವರ ನೆನಪಿಗಾಗಿ ನಿಲ್ಲಿಸಿದ ಸ್ಮಾರಕಗಳು. ದಕ್ಷಿಣ ಇಂಡಿಯಕ್ಕೆ ವಿಶಿಷ್ಟವಾದವು. ಇವು ನಿರ್ವಿವಾದವಾಗಿ ರಾಜೇಂದ್ರನ ದಿಗ್ವಿಜಯದಲ್ಲಿ ಯುದ್ಧರಂಗದಲ್ಲಿ ಮಡಿದ ಶೂರರ ಸ್ಮಾರಕಗಳು. ದಕ್ಷಿಣದಿಂದ ಬಂದ ಸೈನ್ಯದಲ್ಲಿ ತಮಿಳರ ಜೊತೆಗೆ ಆಂಧ್ರರೂ ಕನ್ನಡಿಗರೂ ಇದ್ದಿರಬೇಕು. ಇದು ಏನೇ ಇರಲಿ ಈ ಪ್ರಕರಣದಿಂದಾಗಿ ಪಶ್ಚಿಮ ಬಂಗಾಳದಲ್ಲಿ (ರಾಧಾ) ಕರ್ಣಾಟಕ ಕ್ಷತ್ರಿಯ ಕುಲದವರ ಪಾಳೆಯಪಟ್ಟೊಂದು ಸ್ಥಾಪಿತವಾಯಿತೆಂಬುದು ತಿಳಿದುಬರುತ್ತಿವೆ. ಬಂಗಾಳೀ ಬ್ರಾಹ್ಮಣರ ವಂಶವೃಕ್ಷಗಳಲ್ಲಿ ಈ ಕರ್ಣಾಟಕ ವಂಶದ ರಾಜರನ್ನೂ ರಾಜ ಬಂಧುಗಳನ್ನೂ ಬಹಳ ಪ್ರಾಚೀನ ಕಾಲಕ್ಕೆ ಎಂದರೆ ಕ್ರಿ.ಶ. ಎಂಟನೆಯ ಶತಮಾನಕ್ಕೆ ಒಯ್ಯುವ ರೂಢಿ ಕಂಡುಬರುತ್ತದೆ. ಆದರೆ ಇದು ಅಸಾಧ್ಯ. ಕರ್ಣಾಟಕ ವಂಶದ ಅತಿ ಪ್ರಾಚೀನ ರಾಜ ಎಂದರೆ ಆದಿಶೂರ. ಈಗ ಯಾವ ಐತಿಹಾಸಿಕ ಸಂಗತಿಯೂ ಈತನ ವಿಷಯದಲ್ಲಿ ಉಪಲಬ್ಧವಿಲ್ಲ. ಆದರೆ ಈತನ ಹತ್ತಿರದ ಸಂತತಿಯವರ ಪೈಕಿ ಹೇಮಂತಸೇನ ಮತ್ತು ಆತನ ಮಗ ಬಲ್ಲಾಳ ಸೇನ ಕಾಣಬರುತ್ತಾರೆ. ಎರಡನೆಯವನು 1160ರಲ್ಲಿ ರಾಜ್ಯವಾಳಿದನೆಂದು ಆತನ ಬಗ್ಗೆ ಇರುವ ಅನೇಕ ಶಿಲಾಶಾಸನಗಳಿಂದ ತಿಳಿದು ಬರುತ್ತದೆ. ಬಲ್ಲಾಳ ಸೇನ ಬಲು ಸಮರ್ಥನಾದ ದೊರೆ; ಪಶ್ಚಿಮ ಬಂಗಾಳದ ಈ ಕರ್ನಾಟಕ ರಾಜವಂಶ ಬೌದ್ಧಪಾಲಾವಂಶವನ್ನು ಬಂಗಾಳದ ಅದ್ಯಂತರವಾಗಿ ಅದುಮಿಟ್ಟು ಸೇನಾ ರಾಜರೆಂದು ಪ್ರಖ್ಯಾತರಾದ ಬಲಿಷ್ಠ ಕರ್ಣಾಟಕ ರಾಜವಂಶವನ್ನು ಪ್ರತಿಷ್ಠಾಪಿಸಿತು. ಬಂಗಾಳದಲ್ಲಿ ಕುಲೀನ ಬ್ರಾಹ್ಮಣರ ಸಂಸ್ಥೆಯೊಂದನ್ನು ಪ್ರತಿಷ್ಠಾಪಿಸಿದ ಹೊಣೆ ಬಲ್ಲಾಳನದು. ಈತ ಬಂಗಾಳದ ವಿದ್ವನ್ಮಣಿಗಳೂ ಸದಾಚಾರನಿಷ್ಠರೂ ಆದ ಐವತ್ತಾರು ಬ್ರಾಹ್ಮಣರಿಗೆ ಅಗ್ರಹಾರಗಳನ್ನು ದಾನವಾಗಿ ಕೊಟ್ಟ, ಇವರು ಕುಲೀನರೆಂದು ಎಲ್ಲರಿಂದಲೂ ಮನ್ನಣೆ ಪಡೆದರು. ಇವರ ವಂಶೀಯರನ್ನು ಈ ಕಾಲದ ತನಕವೂ ಜನ ಅತ್ಯಂತ ಪೂಜ್ಯಭಾವದಿಂದ ಕಾಣುತ್ತಿದ್ದರು.

ದೊರೆ ಬಲ್ಲಾಳನ ಹೆಸರು ಬಂಗಾಳಿಯದಲ್ಲ. ಅದು ಕರ್ನಾಟಕ ದೇಶದಿಂದ ಬಂದದ್ದು. ಬಂಗಾಳದಲ್ಲಿ ಈತನನ್ನು ಈಗಲೂ ಬಲು ಮರ್ಯಾದೆಯಿಂದ ಸ್ಮರಿಸುತ್ತಾರೆ. ಬಂಗಾಳದ ಇತಿಹಾಸದಲ್ಲೂ ಸಂಪ್ರದಾಯಗಳಲ್ಲೂ ಈತನಿಗೊಂದು ಗೌರವ ಸ್ಥಾನವಿದೆ. ಈತ ಸ್ವತಃ ವಿದ್ವಾಂಸ ಮತ್ತು ವಿದ್ವತ್ ಪೋಷಕ. ಸಂಸ್ಕøತದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಅವುಗಳ ಪೈಕಿ ದಾನಸಾಗರ ಒಂದು. ಇದರಲ್ಲಿ ಅನೇಕ ವಿಧದ ದಾನಗಳನ್ನೂ ಅವುಗಳ ಧಾರ್ಮಿಕ ಫಲಗಳನ್ನೂ ಸುದೀರ್ಘವಾಗಿ ವರ್ಣಿಸಿದೆ. ಈ ಗ್ರಂಥವನ್ನು ಕಲ್ಕತ್ತದ ಏಷ್ಯಾಟಿಕ್ ಸೊಸೈಟಿ ಪ್ರಕಟಿಸಿದೆ.

ಸರ್ವಾನಂದ ವಂಧ್ಯ- ಘಾಟೀಯ ಎಂಬ ಬಂಗಾಳೀ ಬ್ರಾಹ್ಮಣನೊಬ್ಬ ಅಮರಕೋಶದ ಮೇಲೆ ವಾಖ್ಯಾನ ರಚಿಸಿದ. ಇದರಲ್ಲಿ ಅನೇಕ ಸಂಸ್ಕøತ ಶಬ್ದಗಳಿಗೆ ಪ್ರಾಚೀನ ಬಂಗಾಳಿಯ ಸಮಾನ ಪದಗಳಿಂದ ಅರ್ಥ ವಿವರಣೆ ನೀಡಲಾಗಿದೆ. ಕಾಲಕ್ರಮೇಣ ಈ ವಾಖ್ಯಾನ ಬಂಗಾಳದಲ್ಲಿ ಕಣ್ಮರೆಯಾಯಿತು, ಆದರೆ ಕೇರಳದಲ್ಲಿ ಮಲೆಯಾಳ ಲಿಪಿಯಲ್ಲಿ ಇದರ ಕೈಬರಹದ ಪ್ರತಿಯೊಂದು ಉಳಿದಿದೆ. ಗಾಡೀಯ ಮತ್ತು ಮಯೂರ ಶೈವಪಂಥರಲ್ಲಿ ಘನವಿದ್ವಾಂಸರನೇಕರು ಇದ್ದರು. ಇವರು ಮಧ್ಯಪ್ರದೇಶ ಮತ್ತು ದಕ್ಕನ್ನಿನ ಮಾಂಧಾತ ಮತ್ತು ಇತರ ಸ್ಥಳಗಳಲ್ಲಿ ನೆಲೆಗೊಂಡಿದ್ದರು. ಮುರುಗನ್ ಅಥವಾ ಕುಮಾರ ದೇವರ ಭಕ್ತನಾದ ಹದಿನೈದನೆಯ ಶತಮಾನದ ಮಹಾಕವಿ ಅರುಣಗಿರಿಯರ್ ಎಂಬಾತನ ಪೂರ್ವಜರು ಬಂಗಾಳದಿಂದ ಬಂದವರೆಂಬ ಪ್ರತೀತಿಯಿದೆ.

ಬಂಗಾಳದ ಕೊನೆಯ ಹಿಂದೂ ರಾಜನಾದ ಲಕ್ಷ್ಮಣಸೇನ ಬಲ್ಲಾಳನ ಮಗ ಈತ ಸ್ವತಃ ವಿದ್ವಾಂಸ ಮತ್ತು ಕವಿಯಾಗಿದ್ದುದಲ್ಲದೆ ಗೀತಗೋವಿಂದದ ಕರ್ತೃವಾದ ಜಯದೇವ ಮತ್ತು ಉಮಾಪತಿಧರ, ಧೋಯೀ ಮುಂತಾದ ಸಂಸ್ಕøತ ಕವಿಗಳಿಗೂ ಆಶ್ರಯದಾತನಾಗಿದ್ದ. ಈತನ ಆಳ್ವಿಕೆಯಲ್ಲಿ ಕ್ರಿ.ಶ. 1203ರಿಂದ ಆಚೆಗೆ ತುರುಕರು ಪಶ್ಚಿಮ ಬಂಗಾಳವನ್ನು ಆಕ್ರಮಿಸಿಕೊಂಡು ನೆಲೆಸಿದರು. ಕರ್ಣಾಟಕದ ಶಾಖೆಯೊಂದು ಪಶ್ಚಿಮ ಬಂಗಾಳದಿಂದ ಇನ್ನೂ ಉತ್ತರಕ್ಕೆ ಹೋಗಿ ನ್ಯಾಯದೇವನ ಆಶ್ರಯದಲ್ಲಿ ಮಿಥಿಲೆಯಲ್ಲೂ ನೇಪಾಳದ ಆಗ್ನೇಯ ಭಾಗದಲ್ಲೂ (ಮೊರಂಗ ದೇಶ) ನೆಲಸಿತು.

ಬಂಗಾಳದಲ್ಲಿ, ಕರ್ನಾಟಕದವರನ್ನು ಬ್ರಹ್ಮಕ್ಷತ್ರಿಯರೆಂದು ಕರೆಯುತ್ತಿದ್ದರು. ಅವರ ಮೂಲದ ಸುತ್ತ ಕಲ್ಪಿತ ಕಥೆಗಳು ಹುಟ್ಟಿಕೊಂಡವು. ಬ್ರಹ್ಮಪುತ್ರದ ಮೂಲದೇವತೆ ಶೂದ್ರ ಸ್ತ್ರೀಯೊಂದಿಗೆ ಸಂಗಮಸಿದುದರ ಪರಿಣಾಮವಾಗಿ ಜನಿಸಿದ ಪುತ್ರನಿಂದ ಈ ವಂಶ ಹುಟ್ಟಿತೆಂಬ ಕಥೆಯಿದೆ. ಬ್ರಹ್ಮಪುತ್ರವೆಂಬುದು ಸಿಂಧೂ ಶೋಣಾಗಳಂತೆ ನದಿಯೆ ಹೊರತು ಗಂಗೆ ಕಾವೇರಿಗಳಂತೆ ನದಿಯಲ್ಲ.

ಮನಸಾದೇವಿ ಎಂಬ ನಾಗದೇವತೆಯ ಪಂಥ ಆಂಧ್ರ ಮತ್ತು ಕರ್ನಾಟಕ ದೇಶಗಳಲ್ಲಿ ಪ್ರಚಲಿತವಾಗಿರುವ ಇಂಥ ಪಂಥಗಳಿಂದ ಪ್ರಭಾವಿತವಾಗಿದೆ ಎಂದು ಭಾವಿಸಲಾಗಿದೆ. ಶಕ್ತಿ ಎಂದರೆ ಚಂಡಿ ಅಥವಾ ಚಾಮುಂಡಿ ಮುಂತಾದ ಹೆಸರುಳ್ಳ ಮಾತೃದೇವತಾ ಪೂಜೆಯೂ ಬಂಗಾಳಕ್ಕೆ ಕರ್ನಾಟಕಕ್ಕೂ ಸಮಾನವಾಗಿರುವ ಮತ್ತೊಂದು ಅಂಶ. ಮಧ್ಯಬಂಗಾಳಿಯಲ್ಲಿ ಸ್ತ್ರೀಯರು ತಲೆಯನ್ನು ಬಾಚಿ ಜಡೆಯನ್ನು ಹೆಣೆದುಕೊಳ್ಳುವ ಒಂದು ಬಗೆಗೆ ಕನ್ನಡಶೈಲಿ (ಕಾನಡ ಖೋಂಪಾ) ಎಂಬ ಹೆಸರಿದೆ. ಇದು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ರಾಜರ ಆಸ್ಥಾನದಲ್ಲಿ ಪ್ರಚಲಿತವಿದ್ದ ಶ್ರೀಮಂತರ ಶೈಲಿಯಾಗಿರಬಹುದು. ಉತ್ತರ ಭಾರತದ ಸಂಗೀತ ಪದ್ಧತಿಯಲ್ಲಿ ನಿಬದ್ಧವಾಗಿರುವ ಕರ್ನಾಟಕ ಅಥವಾ ಕಾನಡಾರಾಗ ಬಂಗಾಳಕ್ಕೂ ಬಂತು.

ಪ್ರಾಚೀನ ಕಾಲ ಕ್ರಿ.ಶ. 1000-1200: ಈಗ ಉಳಿದಿರುವ ಅತ್ಯಂತ ಪ್ರಾಚೀನ ಬಂಗಾಳೀ ಸಾಹಿತ್ಯ ಎಂದರೆ 47 ಹಾಡುಗಳ ಗುಚ್ಛ. ಈ ಹಾಡುಗಳನ್ನು ಮಹಾಯಾನ ಬೌದ್ಧಮತದ ಸಹಜಿಯಾ ಪಂಥಕ್ಕೆ ಸೇರಿದ ಸಿದ್ಧರು ಅಥವಾ ಸಿದ್ಧಾಚಾರ್ಯರು ಎಂಬ ಸಂತವರ್ಗವೊಂದು ರಚಿಸಿತು. ಚರ್ಯಾಪದಗಳೆಂದು ಕರೆಯಲ್ಪಡುವ ಈ ಹಾಡುಗಳು ಟೆಬೆಟಿನ್ ಭಾಷೆಯ ಭಾಷಾಂತರದಲ್ಲೂ ಉಪಲಬ್ಧ. ಇವು ಒಗಟಿನ ಅಥವಾ ಬೆಡಗಿನ ವಚನಗಳಂತಿವೆ. ಇವುಗಳ ಬಾಹ್ಯಾರ್ಥ ವಿಶದವಾಗಿಯೇ ಇದೆ ಆದರೆ ಅಂತರಾರ್ಥಕ್ಕೆ ಮಾತ್ರ ವ್ಯಾಖ್ಯಾನ ಬೇಕಾಗುತ್ತದೆ:
ಕೊಳ್ಳುತಾವುದ ತೊರೆಯುತಾವುದ, ಏತರೊಳನಾನಿರುವೆನು
ಸುತ್ತುವರಿದಿಹ ಬೇಟೆಗಾರರ ಹುಯಿಲು ಮೊಳಗುವುದೆಲ್ಲೆಡೆ
ಎಲ್ಲರಿಗು ಹಗೆ ಹುಲ್ಲೆಯಾಯಿತು ತನ್ನ ಮಾಂಸದ ಕತದೊಳೇ
ಬೇಟಗಾರನು ಬುಸುಕು ಅದನುಗಳಿಗೆಯೂ ಬಿಡ ಸುಮ್ಮನೆ
ಹುಲ್ಲುಮುಟ್ಟದು ಹುಲ್ಲೆ ಕುಡಿಯದು ನೀರಿನೊಂದೂ ಗುಟಕನು
ಹುಲ್ಲೆಯಿರುವೆಡೆ ಬಲ್ಲರಾರು-ಸಾರಗದ ಎಡೆ ಕಾಂಬರೇ?
ಹುಲ್ಲೆ ಎನ್ನುವುದು: ಆಲಿಪೆಯ ಓಸಾರಗಾ! ಈ ಹಳುವ
ತೊರೆದೋಡು, ತಳುವದಯೆ ತಿರಿಯುತ್ತಿರು. ಓಡುತಿಹ
ಸಾರಗದ ಗೊರಸುಗಳೆಂಟಕದಿವೆ ನಮ್ಮಲ್ಲಿಗೆ

ಬುಸುಕು ಎಂಬನು ಮಂದಮತಿಗೆ ಎಟುಕದೈ ಇದರರ್ಥವು
ಈ ಗೀತೆಗಳಲ್ಲಿ ಕಾಣುವ ದ್ವಿಪದಿಗಳಲ್ಲಿ ಸಾವಿರ ವರ್ಷಗಳ ಹಿಂದಿನ ಬಂಗಾಳೀ ಜನ ಜೀವನ ಚಿತ್ರವಿದೆ. ಇವುಗಳಲ್ಲಿ ಕೆಲವಕ್ಕೆ ಗಮನಾರ್ಹವಾದ ಭಾವಗೀತೆ ಸೌಂದರ್ಯವಿದೆ. ಅನೇಕ ಬಂಗಾಳೀ ವಿದ್ವಾಂಸರು ಬಂಗಾಳದ ಒಳಗೂ ಹೊರಗೂ ಈ ಗೀತೆಗಳನ್ನು ಅವುಗಳ ಭಾಷೆ ಮತ್ತು ಅಂತರಾರ್ಥ ತಿಳಿಯುವ ಸಲುವಾಗಿ ಪರಾಮರ್ಶಿಸಿದ್ದಾರೆ.

ಬಂಗಾಳಕ್ಕೆ ತುರುಕರು ದಾಳಿಯಿಟ್ಟದ್ದು ಒಂದು ಚಂಡಮಾರುತ ಹಾಯ್ದು ಹೋದಷ್ಟು ರೌದ್ರವಾಗಿತ್ತು. 1200ರಿಂದ 1400ರ ತನಕ ಇಸ್ಲಾಮ್ ಧರ್ಮ ಈ ನೆಲದ ಇಸ್ಲಾಮ್‍ಪೂರ್ವದ ಸಂಸ್ಕøತಿಯನ್ನೆಲ್ಲ ನಾಶ ಮಾಡತೊಡಗಿತು. ತುರುಕರೂ ಅವರ ತರುವಾಯ ಬಂದ ಭಾರತೀಯ ಮತ್ತು ಪರಕೀಯ ವಂಶಜರೂ ಪಾರಸಿ ಭಾಷೆಯನ್ನು ರಾಜನ ಆಸ್ಥಾನದ ವ್ಯವಹಾರಗಳಲ್ಲೂ ಅರಬ್ಬಿ ಭಾಷೆಯನ್ನು ತಮ್ಮ ಧಾರ್ಮಿಕ ಪ್ರಸಂಗಗಳಲ್ಲೂ ಬಳಸಿದರು. ಹೀಗಾಗಿ 1200ಕ್ಕೆ ಹಿಂದಿನ ಬಂಗಾಳೀ ಸಾಹಿತ್ಯದ ಎಲ್ಲೋ ಅತ್ಯಲ್ಪ ಭಾಗಮಾತ್ರ ಉಳಿದುಕೊಂಡಿದೆ.

ಮಧ್ಯ ಬಂಗಾಳೀ ಯುಗ; ಚೈತನ್ಯನಿಗೂ ಹಿಂದಿನ ಸಾಹಿತ್ಯ: ಈ ದಾರಣಯುಗದಲ್ಲಿಯ ಕೆಲವು ಕವಿಗಳ ಹೆಸರು ಮಾತ್ರ ಉಳಿದುಕೊಂಡು ಬಂದಿದೆ. ಅವರುಗಳೆಂದರೆ, ಲಾವುಸೇನ ಎಂಬ ಶೂರನಾಯಕನ ಕಥೆ ಹೇಳುವ ಒಂದು ದೀರ್ಘಕಥನವನ್ನು ಮೊದಲು ಬಾರಿಗೆ ರಚಿಸಿದನೆಂದು ಹೇಳಲಾದ ಮಯೂರ ಭಟ್ಟ, ಬಿಹುಲಾ ಮತ್ತು ಆಕೆಯ ಪತಿ ಲಖಿಂದರ್ ಎಂಬವರ ಕಥೆಯನ್ನು ನಿರೂಪಿಸಿದ ಕಾಣಾ ಹರಿದತ್ತ ಮುಂತಾದವರು. ತುರುಕರು ರಾಜ್ಯವನ್ನು ಗೆದ್ದುಕೊಂಡ ಬಳಿಕ ಬಂಗಾಳೀ ಸಾಹಿತ್ಯದಲ್ಲಿ ಗೋಚರಿಸುವ ಒಂದು ದೊಡ್ಡ ಹೆಸರೆಂದರೆ ಪದಗಳನ್ನು ಬರೆದ ಚಂಡಿದಾಸನದು. ಈತ ರಾಧಾಕೃಷ್ಣರ ಮೇಲಣ ಪ್ರಣಯಗೀತೆಗಳನ್ನು ನಾಡ ತುಂಬ ಹರಡಿದ. ಯಮುನಾ ನದಿಯದಡದಲ್ಲಿದ್ದ ಬೃಂದಾವನದ ಹಳ್ಳಿಗಾಡಿನ ಹಿನ್ನೆಲೆಯಲ್ಲಿ ಮನೋಹರ ಪ್ರಸಂಗಗಳನ್ನೂ ಸನ್ನಿವೇಶಗಳನ್ನೂ ಚಿತ್ರಿಸುವ ಈ ಗೀತೆಗಳು ಅತೀಂದ್ರಿಯ ದೈವಾನುಭೂತಿಗಳ ಲಕ್ಷಣ ಹೊಂದಿ ಜೀವಾತ್ಮ (ರಾಧಾ) ಪರಮದೈವಕ್ಕೆ (ಕೃಷ್ಣ) ಹಂಬಲಿಸುವ ಪ್ರಣಯಭಾವವನ್ನು ಮೈಗೂಡಿಸಿಕೊಂಡಿವೆ. ಉತ್ಕಟ ಕಾಮ ಮತ್ತು ರತಿಯ ರೂಪ ಪ್ರತೀಕಗಳಲ್ಲಿ ಶ್ರೀಮಂತವೂ ಬಹುರಾಗ ಪರಿಪ್ಲುತವೂ ಆದ ಆಧ್ಯಾತ್ಮಿಕಾನುಭವವೊಂದು ಬಂಗಾಳೀ ಜನರ ಮನಸ್ಸಿನಲ್ಲಿ ಸುಳಿಯತೊಡಗಿ ಒಂದು ವಿಶಿಷ್ಟ ಬಂಗಾಳೀ ಸಾಹಿತ್ಯ ಪ್ರಕಾರ (ಇದು ಮುಂದೆ ಪರ್ಷಿಯನ್ ಸೂಫೀಭಾವಗೀತೆಗಳ ಪ್ರಭಾವಕ್ಕೆ ಒಳಗಾಗಿರುವ ಸಂಭವವುಂಟು) ಮೂರ್ತೀಭವಿಸಿತು.

ಚಂಡೀದಾಸನ ಹೆಸರು ಬಂಗಾಳೀ ಪ್ರಾಚೀನ ಸಾಹಿತ್ಯದಲ್ಲಿ ಬಲುತೊಡಕಿನ ಸಮಸ್ಯೆ ಎಬ್ಬಿಸಿತು. ತನ್ನ ತಾಯಿನುಡಿಯ ವಿಷಯದಲ್ಲಿ ಆಸಕ್ತಿ ಇರುವ ಯಾವ ಬಂಗಾಳೀಯೇ ಆಗಲಿ, ಕೀರ್ತನೆಗಳೆಂಬ ಹೆಸರಿನ ವೈಷ್ಣವ ಭಕ್ತಿಗೀತೆಗಳನ್ನು ಕೇಳಿರುವ ಯಾವ ಗ್ರಾಮದವನೇ ಆಗಲಿ ಚಂಡಿದಾಸ ಪ್ರಾಚೀನ ಬಂಗಾಳದ ಒಬ್ಬ ಮಹಾಕವಿಯೇ ಆಗಲಿ, ಕೀರ್ತನೆಗಳೆಂಬ ಹೆಸರಿನ ವೈಷ್ಣವ ಭಕ್ತಿಗೀತೆಗಳನ್ನು ಕೇಳಿರುವ ಯಾವ ಗ್ರಾಮದವನೇ ಆಗಲಿ ಚಂಡಿದಾಸ ಪ್ರಾಚೀನ ಬಂಗಾಳದ ಒಬ್ಬ ಮಹಾಕವಿಯೆಂದೂ ಭಕ್ತನೆಂದೂ ಹೇಳುತ್ತಾನೆ. ಕೊನೆಯ ಚರಣದಲ್ಲಿ ಚಂಡಿದಾಸ ರಚಿತವೆಂದು ಹೇಳುವ ಆತನ ಅಂಕಿತವುಳ್ಳ 1200ಕ್ಕೂ ಹೆಚ್ಚಿನ ವೈಷ್ಣವ ಗೀತೆಗಳು, ಬಹುವಾಗಿ ರಾಧಾಕೃಷ್ಣರ ಪ್ರಣಯದ ಮೇಲಿನವು. ಇವು ಈಗ ಬಂಗಾಳಿಯಲ್ಲಿ ಪ್ರಚಾರದಲ್ಲಿವೆ. ಈ ಕವಿತೆಗಳು ಅದೇ ಹೆಸರಿನ ಅನೇಕ ಕವಿಗಳು ರಚಿಸಿರುವ ಗೀತೆಗಳ ಸಂಗ್ರಹವೆಂದು ಈಗ ಸಾಮಾನ್ಯವಾಗಿ ಭಾವಿಸಲಾಗಿದೆ. ಬಡು ಎಂಬ ಉಪನಾಮದಿಂದ ಅಲಂಕೃತನಾದ ಪ್ರಾಚೀನತಮ ಚಂಡೀದಾಸ (14-15 ಶತಮಾನ) ಕೃಷ್ಣಕೀರ್ತನ ಎಂಬುದನ್ನು ರಚಿಸಿದಾತ. ಇದೊಂದು ದೀರ್ಘಕಾವ್ಯ. ಇದರಲ್ಲಿ ರಾಧಾಕೃಷ್ಣರ ಪ್ರಣಯ ಕುರಿತ ಅನೇಕ ಭಾವಗೀತೆಗಳಿವೆ. ಇವುಗಳಲ್ಲಿ ಅನಂತ ಚಂಡೀದಾಸನೆಂಬ ಅಂಕಿತ ಗೋಚರಿಸುತ್ತದೆ. (ಇದು ಈಗ ನಮಗೆ ದೊರೆತಿರುವ ಬಂಗಾಳೀ ಮಧ್ಯಯುಗದ ಪೂರ್ವಭಾಗಕ್ಕೆ ಸೇರಿದ ಪ್ರಾಚೀನತಮ ಬಂಗಾಳೀ ಕೃತಿ. ಚೈತನ್ಯದೇವ ಜನ್ಮತಾಳಿದ ಕಾಲಕ್ಕಿಂತ ಹಿಂದಿನ ಅವಧಿಯಲ್ಲಿ ಇದು ರಚಿತವಾಗಿರಬೇಕು. ಇದನ್ನು ಅತ್ಯಂತ ಈಚಿನದು ಎಂದರೂ, 15ನೆಯ ಶತಮಾನದಲ್ಲಿ ರಚಿತವಾದ ಗ್ರಂಥ ಎನ್ನಬಹುದು). ಅನೇಕ ಗ್ರಂಥಗಳನ್ನು ರಚಿಸಿರುವ ದೀನ ಚಂಡೀದಾಸ ಎಂಬ ಮತ್ತೊಬ್ಬ ಕವಿ 1600ರ ಈಚೆಗೆ ಬರೆಯಲುತೊಡಗಿದ. ಇವರಿಬ್ಬರ ನಡುವೆ ಮನೋಹರವಾದ ಅನೇಕ ಭಾವಗೀತೆಗಳನ್ನು ರಚಿಸಿರುವ ಸಮಕಾಲೀನನೂ ಆಗಿರಬಹುದಾದ ದ್ವಿಜ ಚಂಡೀದಾಸ ಬರುತ್ತಾನೆ.

ದೀನ ಚಂಡೀದಾಸ ಹಲವಾರು ಗ್ರಂಥಗಳನ್ನು ರಚಿಸಿದ್ದರೂ ಸಾಮಾನ್ಯನೆಂದೇ ಹೇಳಬೇಕು. ಬಡು ಚಂಡೀದಾಸನ ಶ್ರೀಕೃಷ್ಣ ಕೀರ್ತನ ಬಂಗಾಳೀ ಸಾಹಿತ್ಯದ ಇತಿಹಾಸದಲ್ಲಿ ಕಾಣುವ ಪ್ರಥಮ ಶ್ರೇಷ್ಠ ಕಥನಕವನ. ಕೃಷ್ಣನಿಗೆ ರಾಧೆ ಪಡುವ ಹಂಬಲ ಬಲುತೀವ್ರವಾಗಿದ್ದು ಈ ಭಾವದ ಮುಂದಿನ ವರ್ಣನೆಗಳಿಗೆ ಒಂದು ವಿಶಿಷ್ಟ ರಂಗನ್ನು ಕೊಡುತ್ತದೆ. ಈತನ ಭಾಷೆ ಸಾಮಾನ್ಯವಾಗಿ ಸುಷ್ಠು ರೂಪವುಳ್ಳದ್ದಾಗಿದೆ; ಮತ್ತು ಬಂಗಾಳೀ ಸಾಹಿತ್ಯದ ಇತಿಹಾಸದಲ್ಲಿ ಬಡುಚಂಡೀದಾಸನ ಸ್ಥಾನ ಇಂಗ್ಲಿಷ್ ಕವಿ ಚಾಸರ್‍ನ ಸ್ಥಾನಕ್ಕೆ ಸರಿಸಮಾನವಾಗಿದೆ.

ಹದಿನೈದನೆಯ ಶತಮಾನ; ಮತ್ತು ಚೈತನ್ಯದೇವನ ಕಾಲ: ರಾಮಾಯಣದ ವಸ್ತುವಿನ ಮೇಲೆ ಕಾವ್ಯವನ್ನು ಬಂಗಾಳಿಯಲ್ಲಿ ರಚಿಸಿದ ಜ್ಯೇಷ್ಠ ಹಾಗೂ ಶ್ರೇಷ್ಠ ಕವಿ ಕೃತ್ತಿವಾಸ ಓಝಾ (ಜನನ 1399). ಈತ ಹೇಳಿರುವ ರಾಮಕಥೆ (1420) ಬಂಗಾಳದಲ್ಲೆಲ್ಲ ಬಲು ಮೆಚ್ಚಿಗೆ ಪಡೆಯಿತು. ಆದರೆ, ಇದರ ಭಾಷೆ ಮತ್ತು ಒಳಪಿಡಿಗಳು ಶತಮಾನಗಳು ಕೈಯಲ್ಲಿ ಸಿಕ್ಕಿ ತೀವ್ರ ಬದಲಾವಣೆ ಹೊಂದಿದುವು. ಇವರ ಪೈಕಿ ಕೊನೆಯವ ಜಯಗೋಪಾಲ ತರ್ಕಾಲಂಕಾರ. ಮೂಲ ಸಂಸ್ಕøತ ಗ್ರಂಥದಲ್ಲಿ ಮಾನವೀಯ ಗುಣಗಳಿಂದಲೂ ಧೈರ್ಯ ಶೌರ್ಯ ಸಾಹಸಗಳಿಂದಲೂ ಶೋಭಿಸುವ ರಾಮನಿಗೆ ಬದಲಾಗಿ ಪವಾಡಗಳನ್ನು ಮೆರೆದು ಭಕ್ತರಲ್ಲಿ ವಿಶ್ವಾಸತೋರುವ ಸಾಧುವು ದಯಾಮಯನೂ ಆದ ರಾಮನ (ಕೃಷ್ಣನ ಪ್ರತಿರೂಪ) ಚಿತ್ರಣ ಈತನ ಬಂಗಾಳೀ ಗ್ರಂಥದ ಲಕ್ಷಣ.

ಗುಣರಾಜ ಖಾನ್ ಎಂಬ ಉಪನಾಮವುಳ್ಳ ಮಾಲಾಧರವಸು ಕೃಷ್ಣಕಥೆಯನ್ನು ಪದ್ಯದಲ್ಲಿ ರಚಿಸಿದ (1473-80). ಭಾಗವತ ಪುರಾಣವನ್ನು ಅವಲಂಬಿಸಿ ಬರೆದ ಈ ಕೃತಿ ಭಾರತದ ಇತರ ಭಾಗಗಳಲ್ಲಿ ಹೇಗೋ ಹಾಗೆ ಇಲ್ಲೂ ಜನಪ್ರಿಯವಾಯಿತು. ಮನಸಾದೇವಿ ಎಂಬ ನಾಗದೇವತೆಯ ಮೇಲಣ ಕಥೆಗಳು, ಅದರಲ್ಲೂ ಬಿಹುಲಾ ಎಂಬ ಪತಿವ್ರತಾಶಿರೋಮಣಿ ಮತ್ತು ಆಕೆಯ ಪತಿ ಲಿಖಿಂದರ್ (ಲಕ್ಷ್ಮೀಂಧರ ಎಂಬುದು ಸಂಸ್ಕøತರೂಪ) ಎಂಬವರ ಸುಂದರ ಕಥೆ (ಇದರಲ್ಲಿ ಮದುವೆಯ ರಾತ್ರಿಯಲ್ಲಿ ಲಖಿಂದರ ಹಾವು ಕಡಿದುಸತ್ತು ಬಿಹುಲೆಯ ಭಕ್ತಿಯಿಂದ ಪುನಃ ಜೀವ ಪಡೆಯುತ್ತಾನೆ) ಎರಡು ಮಹಾಕಾವ್ಯಗಳಲ್ಲಿ ನಿರೂಪಿತವಾಗಿದೆ. ಒಂದನ್ನು ಈಗ ಬಾಂಗ್ಲಾ ದೇಶದಲ್ಲಿರುವ ಬರಿಸಾಲ್ ಜಿಲ್ಲೆಯ ಗೋಯಿಲ ಪುಲ್ಲಶ್ರೀ ಎಂಬುದರಲ್ಲಿಯ ವಿಜಯಗುಪ್ತನೂ ಮತ್ತೊಂದನ್ನೂ (1492) ಕಲ್ಕತ್ತೆಯ ಹತ್ತಿರವಿರುವ ಬಾದುಡಿಯಾ ವಟಿಗ್ರಾಮದ ವಿಪ್ರದಾಸ ಪಿಪಾಲೈ ಎಂಬಾತನೂ ರಚಿಸಿದ್ದಾರೆ.

ಹದಿನೈದನೆಯ ಶತಮಾನ ಬಂಗಾಳೀ ಸಾಹಿತ್ಯದ ಶ್ರೇಷ್ಠ ಯುಗ. ಸ್ಮಾರ್ತ ರಘುನಂದನ ಭಟ್ಟಾಚಾರ್ಯನಂಥ ಪ್ರಖ್ಯಾತ ನ್ಯಾಯಶಾಸ್ತ್ರಕಾರರು ರಘುನಾಥ ಶಿರೋಮಣಿಯಂಥ ತಾರ್ಕಿಕರು ಬಂಗಾಳದಲ್ಲಿ ಸಂಸ್ಕøತ ವ್ಯಾಸಂಗ ಸಂಪ್ರದಾಯಗಳನ್ನು ದೃಢಗೊಳಿಸಿದರು. ಚತುರ್ಭುಜ ಭಟ್ಟಾಚಾರ್ಯನಂಥ ಕವಿ ನೂತನ ಶೈಲಿಯಲ್ಲಿ ಕೃಷ್ಣಕತೆಯನ್ನು (ಹರಿಚರಿತ) ಸಂಸ್ಕøತದಲ್ಲಿ ರಚಿಸಿದ (ಸು. 1440). ವೈಷ್ಣವ ಮತಕ್ಕೆ ಒಂದು ಹೊಸ ರೂಪ ಕೊಟ್ಟ ಮಹಾಪುರುಷ ಚೈತನ್ಯ 1486ರಲ್ಲಿ ಜನಿಸಿದ. ಆಗ ಇಸ್ಲಾಮ್ ಮತ ಮುಖ್ಯವಾಗಿ ಸೂಫೀಗಳಿಂದ ಹರಡಲ್ಪಡುತ್ತಿತ್ತು; ಆದರೆ ಚೈತನ್ಯನ ವೈಷ್ಣವ ಮತ ಪ್ರಾಬಲ್ಯಕ್ಕೆ ಬಂದಾಗ ಇಸ್ಲಾಮ್‍ಮತದ ಪ್ರಾಬಲ್ಯ ಬಹುವಾಗಿ ಕಂದಿತು. ಬಂಗಾಳದ ಮುಸ್ಲಿಮ್ ಪ್ರಭುಗಳು ಹಿಂದೂ ಜನರ ಪಾಂಡಿತ್ಯದ ಸೆಳೆತಕ್ಕೆ ಸಿಕ್ಕಿದರು. ಬಂಗಾಳದ ಸ್ವತಂತ್ರ ಸುಲ್ತಾನ ಹುಸೇನ್‍ಷಾಹ (1493-1519) ಬಂಗಾಳೀ ಸಾಹಿತ್ಯಕ್ಕೆ ಆಶ್ರಯದಾತನಾಗಿದ್ದ. ಅವನ ಮಗ ಸುಲ್ತಾನ್ ನಾಸಿರುದ್ದೀನ್ ನಸರತ್ ಹಾಗೂ ಷಾಗಳ ಕೈಕೆಳಗೆ ಚಿಟ್ಟಗಾಂಗಿನ ರಾಜ್ಯಪಾಲರಾಗಿದ್ದ ಪರಾಗಲ್ ಖಾನ್ ಮತ್ತು ಛುಟ್ಟಿಖಾನರು ಮೊದಲಿಗೆ ಮಹಾಭಾರತ ಕಥೆಯನ್ನು ಕವೀಂದ್ರನೆಂಬ ಕವಿಯಿಂದ ಬರೆಸಿದರು. ಇದು ಸಂಕ್ಷೇಪವಾಗಿದ್ದುದರಿಂದ ಇದಕ್ಕೆ ಪಾಂಡವ ವಿಜಯ ಅಥವಾ ವಿಜಯ ಪಾಂಡವ ಕಧಾ ಎಂಬ ಹೆಸರು ಆಯಿತು. ಎರಡನೆಯ ಬಾರಿಗೆ ಶ್ರೀಕರನಂದಿ ಎಂಬಾತನಿಂದಲೂ ಬರೆಸಲಾಯಿತು. ರಾಮಾಯಣ, ಮಹಾಭಾರತ, ಕೃಷ್ಣಾಯನ ಮತ್ತು ಇತರ ಪೌರಾಣಿಕ ಕಥೆಗಳನ್ನು ಹೇಳುವ ಸಂಪ್ರದಾಯ 15ನೆಯ ಶತಮಾನದಿಂದ 19ನೆಯ ಶತಮಾನದ ತನಕವೂ ನಡೆದು ಬಂತು.

ಹನ್ನೆರಡನೆಯ ಮತ್ತು ಹದಿಮೂರನೆಯ ಶತಮಾನಗಳಲ್ಲಿ ದಕ್ಷಿಣ ಬಿಹಾರವನ್ನೂ ಬಂಗಾಳವನ್ನೂ ಕಬಳಿಸಿದ ಇಸ್ಲಾಂಮಿನ ದಾಳಿಗೆ ಮಿಥಿಲೆ ತುತ್ತಾಗದೆ ಹೇಗೋ ಉಳಿಯಿತು. ಅಲ್ಲಿಯ ವಿದ್ವಾಂಸರು ಪ್ರಾಚೀನ ಹಿಂದೂ ಸಾಂಸ್ಕøತಿಕ ಸಂಪ್ರದಾಯಗಳನ್ನೂ ವಿದ್ವತ್ತನ್ನೂ ಕಾಪಾಡಿಕೊಂಡು ಬಂದರು. ಅಲ್ಲಿಯ ಪ್ರಖ್ಯಾತ ಆಚಾರ್ಯರ ಬಳಿ ಸಂಸ್ಕøತ ವಿದ್ಯಾಭ್ಯಾಸ ನಡೆಸಲು ತರುಣ ಬಂಗಾಳಿಗೆ ಸದ್ಯದ ಒಡಹುಟ್ಟು, ಆ ಕಾಲದಲ್ಲಿ ಮೈಥಿಲೀ ವಿದ್ವಾಂಸರು ತಮ್ಮ ತಾಯಿನುಡಿಯನ್ನು ತಿರಸ್ಕಾರದಿಂದ ಕಾಣುತ್ತಿರಲಿಲ್ಲ. ಜೋತಿರೀಶ್ವರ ಕವಿಶೇಖರನಂಥ ವಿದ್ವಾಂಸ ತನ್ನ ವರ್ಣರತ್ನಾಕರವನ್ನು (ಕಥೆ ಹೇಳುವವರಿಗೂ ಪೌರಾಣಿಕರಿಗೂ ಉಪಯುಕ್ತವಾಗುವಂತೆ ರಚಿಸಿದ ವಿವಿಧ ವಸ್ತು ಮತ್ತು ಪ್ರಸಂಗಗಳ ವರ್ಣನೆಗಳ ಪುಸ್ತಕ) 1325ರಲ್ಲಿ ರಚಿಸಿದ. ವಿದ್ಯಾಪತಿ ಠಾಕೂರ್ (1350-1450) ಪ್ರಣಯದ ಮೇಲೆ ತನ್ನ ಮಧುರ ಭಾವಗೀತೆಗಳನ್ನು ರಚಿಸಿದ. ವಿದ್ಯಾಪತಿ ಶ್ರೇಷ್ಠ ಸಂಸ್ಕøತ ವಿದ್ವಾಂಸ ಮತ್ತು ಮೈಥಿಲಿಯಲ್ಲಿ ನುರಿತ ಕವಿ. ಈತನ ಭಾವಗೀತಗಳು, ಅನೇಕವಾಗಿ ರಾಧಾಕೃಷ್ಣರ ಪ್ರಣಯ ಕುರಿತವು. ಇವು ಮಿಥಿಲೆಗೆ ಹೋದ ತರುಣ ಬಂಗಾಳಿ ವಿದ್ಯಾರ್ಥಿಗಳನ್ನು ಮರುಳಾಗಿಸಿದುವು. ಅವರು ಬಂಗಾಳಕ್ಕೆ ತಂದ (ಇವರಂತೆಯೇ ಅಸ್ಸಾಮಿಗೂ ಒರಿಸ್ಸಾಕ್ಕೂ ಹೀಗೆಯೇ ಹರಿದು ಹೋದ) ಗೀತೆಗಳ ಭಾಷೆ ಬಂಗಾಳಿಗಳ ಬಾಯಲ್ಲಿ (ಹಾಗೆಯೇ ಅಸ್ಸಾಮಿ ಮತ್ತು ಒರಿಯಾಗಳಲ್ಲಿ) ಬದಲಾವಣೆ ಕಂಡಿತು, ಆಯಾ ಭಾಗದ ಕವಿಗಳು ಮೈಥಿಲೀ ಭಾಷೆಯ ಒಡಹುಟ್ಟುಗಳಾದ ಈ ಭಾಷೆಯಲ್ಲಿ ವಿದ್ಯಾಪತಿಯನ್ನು ಅನುಕರಿಸಿ ಬರೆಯತೊಡಗಿದಾಗ ಮೂಲ ಮೈಥಿಲಿ ಸಾಕಷ್ಟು ಮಾರ್ಪಟ್ಟಿತು. ಪರಿಣಾಮದಲ್ಲಿ ಅದು ಅಸ್ಸಾಮ್ ಬಂಗಾಳ ಮತ್ತು ಒರಿಸ್ಸಾಗಳಲ್ಲಿ ಕೃತಕ ಮೂಲದ, ಆದರೆ ಅತಿ ಮಧುರ ಸ್ವರಗಳಿಂದ ಕೂಡಿದ ಎರಡನೆಯ ಸಾಹಿತ್ಯ ಭಾಷೆಯಾಗಿ ಬೇಗನೆ ನೆಲೆಗೊಂಡಿತು. ಅದು ಅಸ್ಸಾಮಿಗೂ ಬಂಗಾಳಿಗೂ ಅಸಹಜವಾದ ಕೆಲವು ಸ್ವರಗತಿಗಳನ್ನು ಕಾಪಾಡಿಕೊಂಡಿತ್ತು. ಅಲ್ಲದೆ ಬಂಗಾಳದಲ್ಲಿ ಇದು ಬ್ರಜಬೋಲೀ ಎಂದು ಹೆಸರಾಂತ ಬ್ರಜ (ವ್ರಜ ಅಥವಾ ವೃಂದಾವನ) ನಾಡಿನಲ್ಲಿ ಕೃಷ್ಣ ಪ್ರೇಮವನ್ನು ಪ್ರಕಟಿಸುವುದಕ್ಕೆ ಅತಿ ಶ್ರೇಷ್ಠ ಭಾಷೆಯೆನಿಸಿಕೊಂಡಿತು. ಇದರ ರೂಢಿಗಳು ಈ ಕಾಲದ ತನಕವೂ ಹರಿದು ಬಂದಿವೆ; ಸ್ವಯಂ ರವೀಂದ್ರನಾಥ ಠಾಕೂರರೇ ಭಾವಗೀತೆಗಳ ಒಂದು ಗ್ರಂಥವನ್ನು (ಭಾನು ಸಿಂಹಠಾಕೊರೇರ ಪದವಾಳೀ ಭಾನುಸಿಂಹ ಎಂದರೆ ರವೀಂದ್ರ ಎಂದರ್ಥ) ಈ ಕಾವ್ಯ ಭಾಷೆಯಲ್ಲಿ ರಚಿಸಿದ್ದಾರೆ.

ವಿದ್ಯಾಪತಿಯ ಭಾವಗೀತೆಗಳು ಎಷ್ಟು ಜನಪ್ರಿಯವಾಗಿದ್ದವೆಂದರೆ, ಜನ ಈತನನ್ನು ಬಂಗಾಳದ ಕವಿಯೆಂದೇ ಎಣಿಸಿದರು. ಇತ್ತೀಚಿಗೆ ಕವಿರಂಜನ ಅಥವಾ ಛೋಟಾ ವಿದ್ಯಾಪತಿ ಎಂಬ ಕವಿ ಈ ಮೂಲ ಕವಿಯೊಂದಿಗೆ ಗೋಜಿಕೊಳ್ಳುವಷ್ಟು ಬೆರೆತು ಹೋಗಿದ್ದಾನೆ. ಬಂಗಾಳದಲ್ಲಿ ಈತ ಬರೆದ ಬ್ರಜಭಾಷಾ ಕವಿತೆಗಳು ಮೂಲ ವಿದ್ಯಾಪತಿಯವೆಂದೇ ಭ್ರಮೆ ಹುಟ್ಟಿಸಿವೆ.

ಮಧ್ಯಯುಗದಲ್ಲಿ ಮಹಾಪುರುಷ ಚೈತನ್ಯನ (1486-1534) ಉದಯ ಬಂಗಾಳದ ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಜೀವನಕ್ಕೆ ಒಂದು ಮಹೋದಯ ತಂದಿತು. ಈತನ ಆಗಮನದಿಂದ ಬಂಗಾಳದ ಬಾಳ್ವೆ ಸಂಸ್ಕøತಿಗಳಿಗೂ ಬುದ್ಧಿ ಆತ್ಮಗಳಿಗೂ ಅಭೂತಪೂರ್ವ ಸ್ಫೂರ್ತಿ ದೊರಕಿತು. ಚೈತನ್ಯ ಸ್ವತಃ ಶಿಕ್ಷಾಷ್ಟಕ ಎಂಬ ಎಂಟು ಶ್ಲೋಕಗಳನ್ನು ಮತ್ತು ಜಗನ್ನಾಥ ಅಥವಾ ವಿಷ್ಣುವನ್ನು ಸ್ತುತಿಸುವ ಸ್ತೋತ್ರಗೀತೆಯೊಂದನ್ನು ಸಂಸ್ಕøತದಲ್ಲಿ ರಚಿಸಿದ್ದಾನೆ, ಅಷ್ಟೆ. ಆದರೆ ಈತನ ಪ್ರಭಾವ ಮಾತ್ರ ತುಂಬ ಮಹಿಮಾನ್ವಿತವಾದದ್ದು. ಎಂಥವರೂ ಈತ ಮಹಾತ್ಮನೆಂದು ಗುರುತಿಸುತ್ತಿದ್ದರು.

ಚೈತನ್ಯನ ತರುವಾಯದ ಕಾಲ: 16 ಮತ್ತು 17ನೆಯ ಶತಮಾನಗಳು: ಈ ಕಾಲದಲ್ಲಿ ಒಂದು ಹೊಸ ಸಾಹಿತ್ಯ ಪ್ರಕಾರವಾದ ಜೀವನ ಚರಿತ್ರೆ ಎಂಬುದು ಬಂಗಾಳದಲ್ಲಿ ಪ್ರತಿಷ್ಠಾಪಿತವಾಯಿತು. 16ನೆಯ ಶತಮಾನದಲ್ಲಿ ತಮ್ಮವೇ ಆದ ಲಕ್ಷಣವನ್ನೂ ಗುಣವನ್ನೂ ದಕ್ಷಿಣ ದೇಶದ ಯಾತ್ರೆಗಳನ್ನು ವಿವರಿಸುವ ಗೋವಿಂದದಾಸ ಕರ್ಮಕಾರನ ಕಡಚಾ (ನೋಟ್ಸ್)-ಇದನ್ನು ಕೆಲವು ವಿದ್ವಾಂಸರು ವಿಶ್ವಾಸರ್ಹವಲ್ಲವೆಂದೂ ಇತ್ತೀಚಿನದೆಂದೂ ಪರಿಗಣಿಸುತ್ತಾರೆ: ವೃಂದಾವನದಾಸನ (1573) ಚೈತನ್ಯ ಭಾಗವತ; ಲೋಚನದಾಸನ (1523-80) ಚೈತನ್ಯಮಂಗಳ; ಜಯಾನಂದನ (1550 ?) ಚೈತನ್ಯಮಂಗಳ; ಎಲ್ಲಕ್ಕಿಂತ ಮುಖ್ಯವಾಗಿ ಶ್ರೀಕೃಷ್ಣ ಕವಿರಾಜನ (1581) ಚೈತನ್ಯ ಚರಿತಾಮೃತ-ಇದು ನಡೆದ ಸಂಗತಿಗಳನ್ನು ನಿಷ್ಕøಷ್ಟವಾಗಿ ಹೇಳುವುದರಲ್ಲೂ ಚೈತನ್ಯನ ದರ್ಶನವನ್ನು ವಿವರಿಸುವುದರಲ್ಲೂ ತುಂಬ ವಿಲಕ್ಷಣವಾಗಿರುವುದಲ್ಲದೆ ಬಂಗಾಳಿಯಲ್ಲಿ ಬರೆದಿರುವ ಅತ್ಯುತ್ತಮ ಗ್ರಂಥಗಳ ಪೈಕಿ ಒಂದಾಗಿದೆ ಕೂಡ, ಇತರ ವೈಷ್ಣವ ಸಂತರು ಮತ್ತು ಶ್ರೇಷ್ಠರ ಮೇಲೆ ರಚಿತವಾದ ಜೀವನ ಚರಿತ್ರೆಗಳೂ ಬಂಗಾಳೀ ಸಾಹಿತ್ಯಕ್ಕೆ ಸಿರಿಯನ್ನು ತಂದಿವೆ. ಇವುಗಳ ಪೈಕಿ ಪ್ರಧಾನವಾದವು ಇವು: ಈಶಾನನಾಗರನ (1564) ಅದ್ವೈತ ಪ್ರಕಾಶ, ನಿತ್ಯಾನಂದನ (1600) ಪ್ರೇಮವಿಲಾಸ, ಯದುನಂದನದಾಸನ (1607) ಕರ್ಣಾನಂದ, ರಾಜವಲ್ಲಭ ಛಟ್ಟನ (17ನೆಯ ಶತಮಾನದ ಆದಿ) ಮುರಳೀವಿಲಾಸ, ಗೋಪೀಜನವಲ್ಲಭದಾಸನ (ಜನನ 1652) ರಸಿಕ ಮಂಗಳ, ಮನೋಹರದಾಸನ (1697) ಅನುರಾಗವಲ್ಲೀ ನರಹರಿ (ಫನಶ್ಯಾಮ) ಚಕ್ರವರ್ತಿಯ (18ನೆಯ ಶತಮಾನದ ಆದಿಭಾಗ) ಭಕ್ತಿರತ್ನಾಕರ ಮತ್ತು ನರೋತ್ತಮ ವಿಲಾಸ ಇವೆಲ್ಲ ಸಾಧು ಸಂತರ ಸಾಹಿತ್ಯದಂತೆ ಶ್ರದ್ಧಾಭಕ್ತಿಗಳನ್ನು ನಿನಾದಿಸುವ ಕೃತಿಗಳು. ಪವಾಡಗಳನ್ನು ಇವು ನಿರರ್ಗಳವಾಗಿ ವರ್ಣಿಸುತ್ತವೆ. ಇದಾದ ಮೇಲೆ, ಜೀವನ ಚರಿತ್ರೆಗಳನ್ನು ಬರೆಯುವ ಪ್ರವೃತ್ತಿ ಇಳಿಮುಖವಾಯಿತು. ಈಗ ಒಂದೂವರೆ ಶತಮಾನದ ಕೆಳಗೆ ಉತ್ತರ ಬಂಗಾಳದ ಬಂಗಾಳಿ ಮುಸಲ್ಮಾನ ಬರಹಗಾರನೊಬ್ಬ ವಾರನ್ ಹೇಸ್ಟಿಂಗ್ಸ್‍ನ ದಿವಾನನಾದ ಕಾಂತಬಾಬು ಎಂಬ ಬಂಗಾಳಿ ಪ್ರಮುಖನನ್ನು ಕುರಿತಂತೆ ಕಾಂತನಾಮ ಎಂಬ ಸಂಪ್ರದಾಯಾನುಸಾರವಾದ ಒಂದು ಜೀವನ ಚರಿತ್ರೆ ಬರೆದಿದ್ದಾನೆ.

16 ಮತ್ತು 17ನೆಯ ಶತಮಾನಗಳಲ್ಲಿ ಜೀವನಚರಿತ್ರೆಗಳಷ್ಟೇ ಜನಪ್ರಿಯವಾಗಿದ್ದ ಕೃತಿಗಳೆಂದರೆ ಪದಗಳು (ಭಾವಗೀತೆಗಳು). ಇವು ರಾಧಾಕೃಷ್ಣರ ದಿವ್ಯ ಪ್ರಣಯವನ್ನೋ ಚೈತನ್ಯನ ಮಹಿಮೆಯನ್ನೋ ಕುರಿತವಾಗಿವೆ. ಜೊತೆಗೆ ಅಲ್ಲೊಂದಿಲ್ಲೊಂದು ಬಲು ಸಮರ್ಥವೂ ಸುಂದರವೂ ಆಗಿರುವ ಸ್ತೋತ್ರಗಳು, ಸಾಮೂಹಿಕ ಪ್ರಾರ್ಥನೆಗಳು ಮತ್ತು ಪ್ರತಿವಚನಗಳು ಈ ಪರಂಪರೆಯವು ಎನ್ನಲಾದ ಹಾಡು ಮತ್ತು ಭಾವಗೀತೆಗಳನ್ನು ರಚಿಸುವ ಸುಮಾರು ಇನ್ನೂರು ಕವಿಗಳ ಹಾಡು ಮತ್ತು ಭಾವಗೀತೆಗಳು ಉಪಲಬ್ಧವಿದೆ. ಇವರ ಪೈಕಿ ಈ ಕವಿಗಳು ಪ್ರಸಿದ್ಧರು. 1. ಗೋವಿಂದ ದಾಸ ಕವಿರಾಜ (1536-1612) ಪ್ರಪುಲ್ಲ ಪ್ರತಿಭಾ ವಿಲಸನದಿಂದಲೂ ಮಧುರ ಶೈಲಿಯಿಂದಲೂ ಕೂಡಿರುವ ಅಸದೃಶವಾದ ಕೆಲವು ಸುಂದರ ಭಾವಗೀತೆಗಳನ್ನು ರಚಿಸಿದ್ದಾನೆ-ಇವುಗಳ ಅನೇಕ ಭಾಗ ಬ್ರಜಬೋಲಿ ಸಾಹಿತ್ಯ ಭಾಷೆಯಲ್ಲಿದೆ. 2. ಶುದ್ಧ ಬಂಗಾಳೀ ಬರಹಗಳಲ್ಲಿ ಪ್ರವೀಣನಾದ ಜ್ಞಾನದಾಸ (ಜನನ 1530), 3. ಕವಿರಂಜನ ವಿದ್ಯಾಪತಿ ಅಥವಾ ಛೋಟಾವಿದ್ಯಾಪತಿ, 4. ರಾಯಶೇಖರ, 5. ಬಲರಾಮದಾಸ, 6. ನರೋತ್ತಮದಾಸ-ಈತ ಬಂಗಾಳಿಗಳ ಪರಿಶುದ್ಧ ಭಾವಕ್ಕೂ ಭಕ್ತಿಗೂ ವಿಖ್ಯಾತವಾಗಿ ವಿಲಕ್ಷಣವೆನಿಸಿರುವ ಸ್ತೋತ್ರ ಗೀತೆಗಳನ್ನೂ ಪ್ರಾರ್ಥನೆಗಳನ್ನೂ ರಚಿಸಿದ್ದಾನೆ.

ಈ ಮಹಾಜನ ಪದಗಳು (ರಾಧ ಮತ್ತು ಕೃಷ್ಣರ ಮೇಲಿನ ವೈಷ್ಣವ ಗೀತೆಗಳಿಗೆ ಬಂಗಾಳದಲ್ಲಿ ಈ ಹೆಸರಿದೆ) ಅನೇಕ ಸಂಗ್ರಹಗಳಲ್ಲಿ ರಕ್ಷಿತವಾಗಿವೆ. ಇದು ಜನರಲ್ಲಿ ಇಂಥ ಹಾಡುಗಳ ಮೇಲಿರುವ ಪ್ರೀತಿಯನ್ನೂ ಅವರು ಇವುಗಳ ವಿಚಾರದಲ್ಲಿ ತೋರಿಸಿರುವ ವೈದುಷ್ಯವನ್ನೂ ಪ್ರಕಟಿಸುತ್ತದೆ. ಈ ಹಾಡುಗಳನ್ನು ಸಂಗ್ರಹಿಸಿರುವ ಕವಿತಾ ಸಂಗ್ರಹಗಳ ಅತ್ಯಂತ ಪ್ರಾಚೀನ ಕಾಲ ಹದಿನೇಳೆನಯ ಶತಮಾನದ ಮಧ್ಯಭಾಗ, ಇವುಗಳ ಪೈಕಿ ಮುಖ್ಯವಾದವು: 1 ಶ್ರೀಖಂಡದ ರಾಮಗೋಪಾಲ ದಾಸನ ಶ್ರೀ ಶ್ರೀರಾಧಾಕೃಷ್ಣ ರಸ ಕಲ್ಪವಲ್ಲೀ; 2 ರಾಮಗೋಪಾಲನ ಮಗನಾದ ಪೀತಾಂಬರದಾಸನ ರಸಮಂಜರೀ-ಇವೆರಡೂ ಹದಿನೇಳನೆಯ ಶತಮಾನದ ಮಧ್ಯಭಾಗದವು. 3 ವಿಶ್ವನಾಥ ಚಕ್ರವರ್ತಿಯ (18ನೆಯ ಶತಮಾನದ ಪೂರ್ವಭಾಗ) ಕ್ಷಣದಾಗೀತ ಚಿಂತಾಮಣಿ; 4 ರಾಧಾ ಮೋಹನ ಠಾಕೂರನ (1725) ಸಂಸ್ಕøತ ವ್ಯಾಖ್ಯಾನ ಸಹಿತವಾಗಿರುವ ಪದಾಮೃತಸಿಂಧು; 5 ವೈಷ್ಣವದಾಸನ (1770) ಪದಕಲ್ಪತರು, ಕೊನೆಯದು ಅತಿ ದೊಡ್ಡ ಸಂಗ್ರಹ; ಇದರಲ್ಲಿ ವಿಷಯಗಳಿಗೆ ಅನುಕ್ರಮವಾಗಿ ಜೋಡಿಸಿರುವ 3,101 ಪದಗಳಿವೆ. ಇದನ್ನು ಬಂಗಾಳೀ ವೈಷ್ಣವ ಗೀತೆಗಳ ಋಗ್ವೇದ ಅಥವಾ ಆದಿಗ್ರಂಥ ಎನ್ನಬಹುದು.

ಹದಿನೇಳನೆಯ ಶತಮಾನದಲ್ಲಿ ಮತ್ತೊಂದು ಸಾಹಿತ್ಯ ವಸ್ತು ಬಂಗಾಳದಲ್ಲಿ ಪ್ರತಿಷ್ಠಾಪಿತವಾಯಿತು. ಇಸ್ಲಾಮೀ, ಪಾರಸಿ ಹಾಗೂ ಅರಬ್ಬೀ ಸಂಸ್ಕøತಿಗಳ ಪ್ರಭಾವ ಸುಮಾರು 1200ರಿಂದ ಪ್ರಾರಂಭವಾಗಿ ನಾಲ್ಕು ಶತಮಾನದ ಪರ್ಯಂತ ಬಂಗಾಳಿಗಳ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟುಮಾಡಿತು. ಅದರಲ್ಲೂ ದೂರದಲ್ಲಿರುವ ಚಿಟ್ಟಗಾಂಗ್ ಮತ್ತು ಅರಕಾನ್ ಪ್ರದೇಶಗಳಲ್ಲಿ ಪರಕೀಯರಾದ ಬರ್ಮೀ ಭಾಷೆಯನ್ನಾಡುವ ಬೌದ್ಧ ಅರಕಾನಿಗಳ ನಡುವೆ ಹಿಂದೂ ಸಂಸ್ಕøತಿಗೆ ದೂರವಾಗಿದ್ದ ಬಂಗಾಳೀ ಮುಸ್ಲಿಮರ ಪಂಗಡಗಳಲ್ಲಿನ ಬಂಗಾಳೀ ಬರಹಗಾರರು ಅರಬ್ಬೀ ಮತ್ತು ಪಾರಸೀ ಪ್ರಣಯ ಪ್ರಸಂಗಗಳ ಕಥೆಗಳನ್ನಲ್ಲದೆ ಇಸ್ಲಾಮೀ ಮತ ಮತ್ತು ಆಚಾರಗಳ ಮೇಲೆ ಬರೆದರು. ಈ ಚಿಟ್ಟಗಾಂಗ್ ಅರಕಾನ್ ಪಂಗಡದ ಅತ್ಯಂತ ಪ್ರಾಚೀನ ಮುಸಲ್ಮಾನ ಕವಿ ದೌಲತ್ ಕಾಜಿ. ಈತ ಉತ್ತರ ಭಾರತದಲ್ಲಿ ಜನಪ್ರಿಯವಾಗಿದ್ದ ಲೋರ-ಚಂದ್ರಾ ಅಥವಾ ಸತೀಮಯನಾ ಎಂಬ ರಜಪೂತ ಶೃಂಗಾರ ಕಥೆಯನ್ನು ರಚಿಸಿದ. ಈತನ ತರುವಾಯ ಬಂದ ಖುರೇಷಿ ಮಾಗನ ಠಾಕೂರ (ಹದಿನೇಳನೆಯ ಶತಮಾನದ ಉತ್ತರಭಾಗ) ರಚಿಸಿರುವ ಚಂದ್ರಾವತಿ ಪರಿಣಯವೂ ಹಿಂದೀ ಮೂಲವನ್ನು ಅವಲಬಿಸಿದ್ದಾಗಿದೆ. ಮಹಮ್ಮದಖಾನ್ (1646) ಕರ್‍ಬಲಾದ ದುರಂತವನ್ನು ವರ್ಣಿಸುವ ಮಕ್ತುಲ್ ಹೊಸೇನ್ ಮತ್ತು ಕೆಯಾಮತ್ ನಾಮ (ಕೊನೆಯ ವಿಚಾರಣೆಯ ದಿನ) ಎಂಬ ಗ್ರಂಥಗಳು ಜನಾದರಣೆ ಪಡೆದಿವೆ. ಅಬ್ದುಲ್ ನಬೀ ಎಂಬಾತನ ಅಮೀರ್ ಹಾಂಜಾ ಎಂಬಾತನ ಆಶ್ಚರ್ಯಕರ ಸಾಹಸಗಳನ್ನು ವರ್ಣಿಸುತ್ತದೆ. ಇದರ ಶೈಲಿ ಸುಂದರವಾದುದು; ಭಾಷೆ ಮತ್ತು ಕಥನ ರೀತಿ ಸಮಕಾಲೀನ ಹಿಂದೂ ಕವಿಗಳದಕ್ಕಿಂತ ಭಿನ್ನವಾಗಿಲ್ಲ. ಚಿಟ್ಟಗಾಂಗ್ ಮತ್ತು ಅರಕಾನಿನನಲ್ಲಿ ಹೇಳಿದ್ದಾರೆ. ಹೀಗೆ ಬಂಗಾಳೀ ಸಾಹಿತ್ಯಕ್ಕೆ ಪ್ರಾಚೀನಾ ಮತ್ತು ಮಧ್ಯಯುಗಗಳ ಬಂಗಾಳೀ ವಸ್ತುವಿನ ಜೊತೆಗೆ ಹೊಸದಾದ ಲೌಕಿಕ ವಸ್ತುಶ್ರೇಣಿಯೊಂದು ಅರಬ್ಬೀ ಮತ್ತು ಪಾರಸೀ ಕವಿಗಳಿಂದ ಬಂದು ಸೇರಿಕೊಂಡಿತು.

ಚಿಟ್ಟಗಾಂಗ್ ಮತ್ತು ಅರಕಾನ್ ಕವಿಗಳ ಪೈಕಿ ಅತ್ಯುತ್ತಮನಾದವ ಅಲಾಓಲ್ (ಅಲ್-ಅವ್ವೆಲ್, 1607-80). ಈತ ಮೊದಲ ಮೇಲೆ ಹೇಳಿದ ಮಾಗಣ ಠಾಕೂರನ ಆಶ್ರಯದಲ್ಲಿದ್ದ. ಈತನ ಗ್ರಂಥಗಳಲ್ಲಿ ಈ ಕೃತಿಗಳು ಸೇರಿವೆ: 1 ಪದ್ಮಾವತಿ (1651). ಇದೊಂದು ಪೂರ್ವ ಹಿಂದಿಯ ಪ್ರಣಯ ಸಾಹಸಗಳ ಕಥೆ (ಸೂಫೀ ತತ್ತ್ವದ ಸಾಂಕೇತಿಕ ಧ್ವನಿ ಇದರಲ್ಲಿದೆ.) ಇದು ಮಾಲಿಕ್ ಮಹಮ್ಮದ್ ಜಯಾಸಿ ಎಂಬಾತ 1540ರಲ್ಲಿ ಬರೆದಿರುವ ಇದೇ ಹೆಸರಿನ ಗ್ರಂಥವನ್ನು ಅವಲಂಬಿಸಿ ರಚಿತವಾದ ಗ್ರಂಥ. 2 ಸೈಪುಲ್‍ಮಲ್ಕ್ ಬದೀ ಉಜ್ಜಮನ್ (1659-69) ಅರೇಬಿಯನ್ ನೈಟ್ಸ್‍ನಿಂದ ತೆಗೆದುಕೊಂಡು ಪ್ರಣಯ ವಿಲಾಸದ ಒಂದು ವಸ್ತುವನ್ನು ಅವಲಂಬಿಸಿ ಬರೆದ ಕೃತಿ: 3 ಹಾಫ್ಟ್ ಪಯ್‍ಕಾರ್ (1660) ಮತ್ತು ಸಿಕಂದರ್ ನಾಮಾ (1673) ಪ್ರಖ್ಯಾತ ಪರ್ಷಿಯನ್ ಕವಿ ನೈeóÁಮಿ (1141-1203) ರಚಿಸಿರುವ ಎರಡು ಶೃಂಗಾರ ಕಥೆಗಳನ್ನು ಅವಲಂಬಿಸಿ ಬರೆದ ಕೃತಿಗಳು. 4 ಮುಸಲ್ಮಾನ ಮತ ಮತ್ತು ಆಚಾರಗಳನ್ನು ಕುರಿತು ಬರೆದ ಟೋಹಫ್ (ಕೊಡಿಗೆ) ಪ್ರಖ್ಯಾತ ಪರ್ಷಿಯನ್ ಗ್ರಂಥದ ಭಾಷಾಂತರ. ಇವನ ಕೃತಿಗಳಲ್ಲೆಲ್ಲ ಪದ್ಮಾವತಿಯೇ ಅತ್ಯಂತ ಜನಪ್ರಿಯವಾದದ್ದು. ಅದರಲ್ಲಿ ಸಂಸ್ಕøತ ಶಬ್ದಬಾಹುಳ್ಯವಿದ್ದರೂ ಪೂರ್ವ ಬಂಗಾಳ ಮತ್ತು ಚಿಟ್ಟಗಾಂಗೀನ ಮುಸಲ್ಮಾನರ ಪ್ರೀತಿ ಅದರ ವಿಷಯದಲ್ಲಿ ತಗ್ಗಲಿಲ್ಲ; ಮತ್ತು ಚಿಟ್ಟಗಾಂಗಿನ ಮುಸಲ್ಮಾನರ ಪ್ರೀತಿ ಅದರ ವಿಷಯದಲ್ಲಿ ತಗ್ಗಲಿಲ್ಲ; ಮತ್ತು ಚಿಟ್ಟಗಾಂಗಿನ ಒಂದು ಗಮಕವರ್ಗ ಮುಸ್ಲಿಮರ ಸಭೆಗಳಲ್ಲಿ ಪದ್ಮಾವತಿಯನ್ನು ವಾಚನಮಾಡಿ ಅದರ ಸೂಫಿûೀ ಅಂತರಾರ್ಥದೊಂದಿಗೆ ಅದನ್ನು ವ್ಯಾಖ್ಯಾನಿಸುವುದನ್ನು ತನ್ನ ವೃತ್ತಿಯಾಗಿ ಮಾಡಿಕೊಂಡಿತು.

ಧರ್ಮಥಾಕೂರ್ ಅಥವಾ ಧರ್ಮ ದೇವತೆಯ (ಇದು ಸೃಷ್ಟಿ-ಅಕ್ಕಿಯ ಸಂಸ್ಕøತಿ ಮತ್ತು ಸಂತಾನವೃದ್ಧಿಯ ಪ್ರಾಚೀನ ಹಿಂದೂ ದೇವತೆ) ಭಕ್ತನಾದ ಲಾವ್‍ಸೆನ್ ಎಂಬಾತ ಪ್ರಾಚೀನ ಬಂಗಾಳದ ಜನಪ್ರಿಯ ಕಥಾನಾಯಕನಾಗಿದ್ದ. ಧರ್ಮಮಂಗಳ ಕಾವ್ಯಗಳು ಎಂಬ ಶೃಂಗಾರ ಮತ್ತು ಧರ್ಮಗಳನ್ನು ಕುರಿತ ಕಾವ್ಯಶ್ರೇಣಿಯಲ್ಲಿ ಈತನ ಸಾಹಸಕೃತ್ಯಗಳನ್ನು ವರ್ಣಿಸಿದೆ. ಈ ವಸ್ತುವಿನ ಮೇಲೆ ಬರೆದ ಅನೇಕ ಕವಿಗಳಲ್ಲಿ ಮಯೂರಭಟ್ಟನೂ (1200ಕ್ಕೆ ಮುಂಚೆ) ಒಬ್ಬ. ಈತನ ಯಾವ ಕೃತಿಗಳೂ ದೊರೆತಿಲ್ಲ.
ಈಗ ಲಭ್ಯವಾಗಿರುವ ಅತಿ ಪ್ರಾಚೀನ ಧರ್ಮಮಂಗಳ ಕಾವ್ಯದ ಕಾಲ ಸುಮಾರು 17ನೆಯ ಶತಮಾನದ ಮಧ್ಯಕ್ಕೆ ಬರುತ್ತದೆ. ಇದನ್ನು ರಚಿಸಿದವ ರೂಪರಾಮ ಚಕ್ರವರ್ತಿ. ಆತನ ತರುವಾಯ ಬಂದವರಲ್ಲಿ 18ನೆಯ ಶತಮಾನದ ಪೂರ್ವ ಭಾಗಕ್ಕೆ ಸೇರಿದವರಾದ ಮಾಣಿಕಗಂಗೊಲಿ ಮತ್ತು ಫನರಾಮ ಚಕ್ರವರ್ತೀ ಎಂಬುವರು ಮುಖ್ಯರು.

ಶಿವನ ಹೆಂಡತಿಯಾದ ಚಂಡೀ ಮತ್ತು ದುರ್ಗೆಗಳನ್ನು ಕುರಿತ ಶೃಂಗಾರ ಮತ್ತು ಮತೀಯ ಕಥೆಗಳು ಸಹ ಬಂಗಾಳಕ್ಕೆ ವಿಶಿಷ್ಟವಾಗಿವೆ. ಹದಿನಾರನೆಯ ಶತಮಾನದಲ್ಲಿ ಮಾಧವಾಚಾರ್ಯ ಮತ್ತು ಕವಿಕಂಕಣ ಮುಕುಂದರಾಮ ಚಕ್ರವರ್ತಿ (1580) ಈ ವಸ್ತುಗಳ ಮೇಲೆ ಎರಡು ಚಂಡೀ ಕಾವ್ಯಗಳನ್ನು ರಚಿಸಿದರು. ಮುಕುಂದರಾಮನ ಗ್ರಂಥ ಈಗಲೂ ಜನಪ್ರಿಯವಾಗಿದೆ. ಇದು ಹದಿನಾರನೆಯ ಶತಮಾನದ ಬಂಗಾಳದ ನೈಜಚಿತ್ರವನ್ನು ಕೊಡುತ್ತದೆ. ಇದರ ತುಂಬ ನಗೆ ಹರಿದಾಡುತ್ತದೆ. ಇದರ ಪಾತ್ರಗಳು ನೈಜಚಿತ್ರವನ್ನು ಮತ್ತು ಮನವೊಪ್ಪುವಂತಿವೆ. ಜನರ ಸುಖ ದುಃಖಗಳು ತೀಕ್ಷ್ಣವಾದ ಒಳನೋಟದಿಂದಲೂ ಸಹಾನುಭೂತಿಯಿಂದಲೂ ಚಿತ್ರಿತವಾಗಿವೆ.

ಹದಿನಾರನೆಯ ಶತಮಾನದ ಪೂರ್ವ ಭಾಗದಲ್ಲಿ ರಘುನಾಥ ಭಾಗವತಾಚಾರ್ಯ ಭಾಗವತ ಪುರಾಣವನ್ನು ಅವಲಂಬಿಸಿ ಕೃಷ್ಣಪ್ರೇಮತರಂಗಿಣೀ ಎಂಬ ಹೊಸದೂ ವಿಶದವೂ ಆದ ಅನುವಾದ ಕೃತಿಯೊಂದನ್ನು ರಚಿಸಿದೆ. ಒಂದು ಶತಮಾನದ ಆಚೆಗೆ ಸಿಂಗಿಯ ಕೃಷ್ಣದಾಸ ಎಂಬ ಕವಿ ಮಹಾಭಾರತವನ್ನು ಬಂಗಾಳೀ ಪದ್ಯಗಳಲ್ಲಿ ಅನುವಾದಿಸಿ ಈ ಕಾವ್ಯ ಸಂಪ್ರದಾಯವನ್ನು ಮುಂದುವರಿಸಿದ. ಈ ಅನುವಾದವೇ ಈಗ ಬಂಗಾಳದಲ್ಲಿ ಪ್ರಸಿದ್ಧವಾಗಿರುವುದು.

ಈತನ ಅಣ್ಣ ಕೃಷ್ಣಕಿಂಕರ ಕೃಷ್ಣನ ಮೇಲೆ ಶ್ರೀಕೃಷ್ಣವಿಲಾಸವೆಂಬ ಕಾವ್ಯ ಬರೆದ. ತಮ್ಮ ಗದಾಧರ ತನ್ನ ಜಗನ್ನಾಥ ಮಂಗಳದಲ್ಲಿ ಜಗನ್ನಾಥನ ದಿವ್ಯ ಮಹಿಮೆಯನ್ನು ಕೀರ್ತಿಸಿದ.

ಛಾಂದ ಸದಾಗರ್ ಮತ್ತು ನಾಗದೇವತೆಯ ಪುರಾತನ ಕಥೆಗಳನ್ನು ಅವಲಂಬಿಸಿ ಎರಡು ಮಹಾಕಾವ್ಯಗಳು ಹದಿನೈದನೆಯ ಶತಮಾನದಲ್ಲಿ ರಚಿತವಾಗಿದ್ದವಷ್ಟೆ. ಈ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಪದ್ಮಪುರಾಣವೆಂಬ ಒಂದೇ ಹೆಸರಿನ ಎರಡು ಕೃತಿಗಳು ಹದಿನಾರನೆಯ ಶತಮಾನದಲ್ಲಿ ಪುನಃ ರಚಿತವಾದುವು. ಹದಿನೇಳನೆಯ ಶತಮಾನದಲ್ಲಿ ಕೇತಕಾದಾಸ ಮತ್ತು ಕ್ಷೇಮಾನಂದರೆಂಬ ಇಬ್ಬರು ಪಶ್ಚಿಮ ಬಂಗಾಳದ ಕವಿಗಳು ಇದೇ ವಿಷಯದ ಮೇಲೆ ಮನಸಾರ ಭಾಸಾನವೆಂಬ (ಮನಸಳನ್ನು ತೇಲಿಸಿದುದು) ಕೃತಿಯನ್ನು ಇಬ್ಬರೂ ಸೇರಿ ರಚಿಸಿದರು. ಇದು ಈಗಲೂ ಬಂಗಾಳೀ ಜನಸಮೂಹದ ಮೆಚ್ಚುಗೆಯನ್ನು ಗಳಿಸಿದೆ. ಹದಿನೇಳನೆಯ ಮತ್ತು ಹದಿನೆಂಟನೆಯ ಶತಮಾನದ ಕವಿಗಳು ತಮ್ಮ ಕಾವ್ಯವನ್ನು ರಚಿಸಲುತೊಡಗಿದ್ದ ಮತ್ತೊಂದು ಜನಪ್ರಿಯ ಕಥಾವಸ್ತು ಮೂಲದಲ್ಲಿ ಬೌದ್ದಮತೀಯವಾಗಿದ್ದ ರಾಜಾಗೋಪೀಚಂದ್ರ ಅಥವಾ ಗೋವಿಂದ ಚಂದ್ರ ಎಂಬುದು. ಮಾಣಿಕ ಚಂದ್ರನ ಮಗನಾದ ಗೋಪೀಚಂದ್ರ ಪಟ್ಟಕ್ಕೆ ಬಂದಮೇಲೆ ಆತನ ತಾಯಿ ಮಯನಾವತಿ ತನ್ನ ಮಗ ರಾಜ್ಯವನ್ನೂ ಹೆಂಡತಿಯರನ್ನೂ ತೊರೆದು ಸಂನ್ಯಾಸಿಯಾಗದಿದ್ದರೆ ಬೇಗೆ ಸಾಯುವನೆಂದು ತನ್ನ ಯೋಗಶಕ್ತಿಯಿಂದ ಕಂಡುಕೊಂಡಳು. ಈ ತರುಣ ರಾಜ ತನ್ನ ಇಷ್ಟಕ್ಕೆ ವಿರುದ್ಧವಾಗಿ ತನ್ನ ಹೆಂಡತಿಯರನ್ನೂ ತೊರೆದು ಕಷ್ಟಕಾಲ ನೀಗುವತನಕ ದೇಶಾಟನೆ ಮಾಡುತ್ತ ಇದ್ದುಬಿಟ್ಟ. ಭಾರತದಲ್ಲೆಲ್ಲ ಹರಡಿದ ಈ ಕಥೆಯ ಮೂಲ ಬಂಗಾಳಿಯದೆಂದು ತೋರುತ್ತದೆ. ಈ ವಸ್ತುವಿನ ಮೇಲೆ ಭವಾನೀದಾಸ ಮಯಿನಾಮತೀರಗಾನ (17ನೆಯ ಶತಮಾನ ?), ಮತ್ತು ದುರ್ಲಭಮಲ್ಲಿಕನ ಗೋವಿಂದ ಚಂದ್ರಗೀತ (18ನೆಯ ಶತಮಾನ), ಜತೆಗೆ ಕೆಲವು ಉತ್ತರ ಬಂಗಾಳೀ ಜನಪದ ಕಥೆಗಳು ಸಹ ರಚಿತವಾಗಿವೆ. ಈ ಜನಪದ ಕಥೆಗಳನ್ನು ಜಿ. ಎ. ಗ್ರಿಯರ್‍ಸನ್ ಮತ್ತು ಇತರರು ಸಂಗ್ರಹಿಸಿದ್ದಾರೆ (1878).

ಹದಿನಾರನೆಯ ಮತ್ತು ಹದಿನೇಳನೆಯ ಶತಮಾನಗಳಲ್ಲಿ ಲೌಕಿಕ ಕಾವ್ಯಗಳೂ ಕಥನ ಕವನಗಳೂ ಬೆಳೆದುವು. ಇವುಗಳ ಪೈಕಿ ಅತಿ ಮನೋಹರವಾದವು ಪೂರ್ವ ಬಂಗಾಳದಿಂದ ಅದರಲ್ಲೂ ಮೈಮನ್‍ಸಿಂಗ್ ಜಿಲ್ಲೆಯಿಂದ ಬಂದವು. ಇವುಗಳಿಗೆ ಐತಿಹಾಸಿಕ ಬುನಾದಿಯಿದೆ. ಇವು ಶೃಂಗಾರರಸ ಸಂಪ್ಲುತವೂ ಅಲಂಕಾರಮಯವೂ ಆಗಿವೆ. ಕಾಳಗದ ಮೇಲಿನ ಮನೋಹರವಾದ ಜನಪದ ಕಥನ ಕವನ ನೌಖಲಿ ಜಿಲ್ಲೆಯ ಚೌಧರೀರಲಡಾಯಿ ಎಂಬುದು.

ಹದಿನೆಂಟನೆಯ ಶತಮಾನ: ಅನೇಕ ವಿಧದಲ್ಲಿ ಇಳಿಮೊಗದ ಕಾಲ. ಮುಸ್ಲಿಮ್ (ಪರ್ಷಿಯನ್) ಮತ್ತು ಇಂಡಿಯನ್ (ಸ್ಥಳಿಯ ಭಾರತೀಯ) ನಾಗರಿಕತೆಗಳ ಹೊಂದಾಣಿಕೆ ಹೆಚ್ಚು ವೇಗದಿಂದ ಸಾಗಿದ್ದರೂ ಪ್ರಭುತ್ವವರ್ಗದ ಬೌದ್ಧಿಕ ಅವನತಿ ಮತ್ತು ಒಳರಾಜ್ಯಗಳ ಒಡಕುಗಳ ಯೂರೋಪಿಯನ್ನರು ಮೇಲೆ ಬರಲು ಅವಕಾಶ ನೀಡಿ, ಕೊನೆಗೆ ಇಂಗ್ಲಿಷರು ದೇಶವನ್ನೆಲ್ಲ ಆಕ್ರಮಿಸಲು ದಾರಿ ಮಾಡಿಕೊಟ್ಟವು. ಕೇಂದ್ರೀಕೃತವಾದ ಮೊಘಲರ ಪ್ರಭುಶಕ್ತಿ ಕಣ್ಮರೆಯಾಯಿತು. ಮರಾಠರೂ ಸಿಕ್ಕರೂ ಮೇಲಕ್ಕೆ ಬಂದರು. ಮುಸ್ಲಿಮ್ ಪ್ರಾಂತರಾಜ್ಯಪಾಲರುಗಳು ಸ್ವತಂತ್ರ ರಾಜ್ಯಗಳನ್ನು ಸ್ಥಾಪಿಸಿಕೊಂಡರು. ಬಂಗಾಳದಲ್ಲಿ ವಸ್ತುತಃ ಸ್ವತಂತ್ರರಾಗಿದ್ದ ನವಾಬರು ಆಡಳಿತಸೂತ್ರವನ್ನು ಕೈಗೆ ತೆಗೆದುಕೊಂಡರು. ಇವರ ಅಲಕ್ಷ್ಯದ ಫಲವಾಗಿ ರಾಜ್ಯದೊಳಗೆ ದಬ್ಬಾಳಿಕೆ ಮತ್ತು ಅರಾಜಕತೆ ತಲೆದೋರಿದುವು. ಇಂಗ್ಲಿಷರ ಈಸ್ಟ್ ಇಂಡಿಯಾ ಕಂಪನಿ ಮತ್ತು ಅದರ ಕೈಕೆಳಗಿನವರಿಗೂ ಬಂಗಾಳದ ನವಾಬನಾದ ಸಿರಾಜುದ್ದೀನನಿಗೂ ತಿಕ್ಕಾಟಕ್ಕೆ ಮೊದಲಾಯಿತು. ಇಂಗ್ಲಿಷರಿಗೂ ಅವರಿಗೆ ಸಹಾಯಕರಾಗಿದ್ದ ಬಂಗಾಳದ ದೇಶದ್ರೋಹಿಗಳಿಗೂ ಅಪಕೀರ್ತಿ ತರುವ ಹಲವಾರು ಪ್ರಸಂಗಗಳು ಜರಗಿ ಪ್ಲಾಸಿ ಕದನದಲ್ಲಿ ಸಿರಾಜುದ್ದೀನನು ಪರಾಜಿತನಾದ. ಇಂಗ್ಲಿಷರು ಬಂಗಾಳದಲ್ಲಿ (1765) ಪ್ರತಿಷ್ಠಾಪಿತರಾದರು. ಇಂಗ್ಲಿಷರು ರಾಜ್ಯವನ್ನು ಕೈಗೆ ತೆಗೆದುಕೊಂಡು ತರುಣದಲ್ಲೇ (1771) ಒಂದು ದೊಡ್ಡ ಕ್ಷಾಮ ತಲೆದೋರಿ ಆ ದೇಶವನ್ನು ಧ್ವಂಸ ಮಾಡಿತು.

ಹದಿನೆಂಟನೆಯ ಶತಮಾನದ ಎಲ್ಲ ಮಹಾ ಕವಿಗಳೂ ಇಂಗ್ಲಿಷರು ಆಳಲು ತೊಡಗುವ ಪೂರ್ವದಲ್ಲಿಯೇ ಬಂದವರು. ಹದಿನೆಂಟನೆಯ ಶತಮಾನದ ಬಂಗಾಳವನ್ನು ಮೂವರು ಪ್ರಮುಖ ಲೇಖಕರು ಪ್ರತಿನಿಧಿಸುತ್ತಾರೆ: ಕವಿ ರಂಜನ ರಾಮಪ್ರಸಾದ ಸೇನ (ಮರಣ 1775); ರಾಯ ಗುಣಾಕರ ಭಾರತ ಚಂದ್ರರಾಯ (1712-?- 60) ಮತ್ತು ಕಲ್ಕತ್ತೆಯ ಹತ್ತಿರವಿರುವ ಭೂಕೈಲಾಸದ ರಾಜಾ ಜಯನಾರಾಯಣ ಘೋಶಾಲ (1752-1821). ರಾಮಪ್ರಸಾದ ಲೋಕಮಾತೆಯಾದ ದೇವಿ ಕಾಳೀ ಅಥವಾ ದುರ್ಗೆಯ ಮಹಾಶಕ್ತಿ ಮತ್ತು ಯೋಗಿ. ಈಗಲೂ ಜನಪ್ರಿಯವಾಗಿರುವ ಆತನ ಸರಳ ಭಾಷೆಯ ಗೀತೆಗಳು ಆತನ ಗಾಢವೂ ಆದ್ರ್ರವೂ ಆದ ಭಕ್ತಿಯನ್ನು ವ್ಯಂಜಿಸುತ್ತವೆ. ಅನ್ನದಾಮಗಳ ಕಾವ್ಯ, ಇದಕ್ಕೆ ಕಾಳಿಕಾಮಂಗಳವೆಂದೂ ಹೆಸರು (1752), ಭಾರತಚಂದ್ರನ ಮೇರು ಕೃತಿ. ಬಂಗಾಳಿಯ ಸುಂದರ ಕಾವ್ಯಗಳಲ್ಲಿ ಇದೂ ಒಂದಾಗಿದೆ. ಜನರ ಪುರಸ್ಕಾರಕ್ಕೆ ಪಾತ್ರವಾಗಿರುವ ಈ ಕಾವ್ಯ ಮೂರು ಭಾಗಗಳಲ್ಲಿದೆ. 1. ಶಿವ ಮತ್ತು ಪಾರ್ವತಿ ಇವರ ಕಥೆಗಳು; 2. ಸಂಸ್ಕøತದ ಕವಿ ಬಿಲ್ಹಣನ ಚೌರ ಪಂಚಾಶಿಕೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ರಚಿತವಾದ ವಿದ್ಯಾ ಮತ್ತು ಸುಂದರದ ಪ್ರಣಯ ಕಥೆ: 3. ಜೆಸ್ಸೂರಿನ (ಯಶೋಹರದ) ಸಾಮಂತರಾಜ ಪ್ರತಾಪಾದಿತ್ಯನನ್ನು ದಮಿಸಲು ಅಂಬೇರದ ರಾಜಾ ಮಾನಸಿಂಘ ಜಹಾಂಗೀರನ ಸೇನಾಧಿಪತಿಯಾಗಿ ಬಂಗಾಳಕ್ಕೆ ಬಂದ ಪ್ರಸಂಗ ಕುರಿತು ಕಥೆ, ಅರ್ಧ ಐತಿಹಾಸಿಕವಾಗಿರುವಂಥದು. ಭಾರತಚಂದ್ರ ಪರಿಣತವಾದ ಭಾಷಾಪ್ರಭುತ್ವವುಳ್ಳಾತ. ಪದೇ ಪದೇ ಅಣಕವಾಡುತ್ತ ಪ್ರಸಂಗಗಳನ್ನೂ ಮಾದರಿ ಪಾತ್ರಗಳನ್ನೂ ಕುಶಲವಾಗಿ ವರ್ಣಿಸುವುದರಲ್ಲೂ ವ್ಯಕ್ತಿಶಃ ಪಾತ್ರಗಳನ್ನು ವಿಶದವಾಗಿ ಲೇಖಿಸುವುದರಲ್ಲೂ ನಿಪುಣ. ಬಂಗಾಳದ ಇತರ ಎಲ್ಲ ಕವಿಗಳ ಸೂಕ್ತಿಗಳಿಗಿಂತಲೂ ಈತನದೇ ಹೆಚ್ಚಾಗಿ ಗಾದೆಗಳಂತೆ ಜನರ ಮಾತುಕಥೆಗಳಲ್ಲಿ ಬರುತ್ತಿರುತ್ತವೆ. ರಾಜ ಜಯನಾರಾಯಣ ಘೋಶಾಲ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ವಿಚಾರಗಳಲ್ಲಿ ತೊಡಗಿದ್ದು ವಯಸ್ಸಾದ ಮೇಲೆ ವಾರಾಣಸಿಯಲ್ಲಿ ನೆಲಸಿ ಅಲ್ಲಿ ಒಂದು ಇಂಗ್ಲಿಷ್ ಶಾಲೆ ಸ್ಥಾಪಿಸಿದ. ಅದಕ್ಕೆ ಈಗಲೂ ಈತನ ಹೆಸರೇ ಇದೆ. ಸಂಸ್ಕøತ ಪದ್ಮಪುರಾಣದ ಕಾಶೀಖಂಡವನ್ನು ಈತ ಭಾಷಾಂತರಿಸಿ ಅದಕ್ಕೆ ತನ್ನ ಕಾಲದ ವಾರಾಣಸಿ ನಗರದ ಜನಜೀವನದ ವಿಶದವೂ ವಿಲಕ್ಷಣವೂ ಆದ ಚಿತ್ರವನ್ನು ಅಳವಡಿಸಿದ್ದಾನೆ.
ಹದಿನೆಂಟನೆಯ ಶತಮಾನದ ಮಧ್ಯಭಾಗದಲ್ಲಿ ಬೀಡುಬೀಸಾಗಿರುವ ವರ್ಗದ ಜನ ಲಘು ಗೀತೆಗಳಲ್ಲೂ ಆಳ ಅಥವಾ ನೈಜ ಭಾವಗಳಲ್ಲಿದೆ ಬರಿಯ ಪದಚಮತ್ಕಾರ ಪ್ರದರ್ಶಿಸುತ್ತಿದ್ದ ಆಶುಕವಿತೆಗಳಲ್ಲೂ ವಿನೋದಗೊಳ್ಳುತ್ತಿದ್ದರು. ಹಗುರ ವಸ್ತುಗಳ ಮೇಲೆ ಹಾಡುಗಾರರು ಆಗತಾನೆ ಕಟ್ಟೆ ಹಾಡುವ ಗೀತೆಗಳೂ ಆಶುಕವಿತ್ವದಲ್ಲಿ ಕವಿಗಳು ಒಬ್ಬರನ್ನು ಹೀಯಾಳಿಸುತ್ತಿದ್ದ ಕವಿತಾಸ್ಪರ್ಧೆಗಳೂ (ಕವಿರ ಲಡಾಯಿ) ಜನಗಳಿಗೆ ತುಂಬ ರುಚಿಸುತ್ತಿದ್ದುವು. ಅನೇಕ ಕವಿವಾಲರ (ಆಶುಕವಿಗಳ) ಪೈಕಿ ದಾಶರಥಿರಾಯ (1804-57) ಎಂಬಾತನ ರಚನೆಗಳು ಭಾಷಾಪ್ರಭುತ್ವ, ಸದ್ಯಃ ಸ್ಫೂರ್ತಿ, ಭಾವನೆಗಳ ನವ್ಯತೆ ಮತ್ತು ವ್ಯಕ್ತಿಗಳ ಸ್ವಭಾವವನ್ನು ಅರಿತು ಅದಕ್ಕೆ ನಗೆಯನ್ನು ಬೆರಸುವ ಚಾತುರ್ಯ-ಇವುಗಳಿಂದ ಕೂಡಿ ವಿಲಕ್ಷಣವಾಗಿದೆ.

ಬಂಗಾಳೀ ಗದ್ಯ ಶೈಲಿಗೆ ತಳಹದಿ ಬಿದ್ದುದು ಹದಿನೆಂಟನೆಯ ಶತಮಾನದಲ್ಲಿ ಹದಿನಾರನೆಯ ಶತಮಾನದಿಂದಲೂ ಪೋರ್ಚುಗೀಸ್ ಮಿಷನರಿಗಳು ರೋಮನ್ ಕೆತೊಲಿಕ್ ಮತಗ್ರಂಥಗಳನ್ನು ಬಂಗಾಳೀ ಭಾಷೆಗೆ ಪರಿವರ್ತಿಸಲು ತೊಡಗಿದರು. 1599ರಲ್ಲಿ ಗೋವಾದಿಂದ ಬಂದ ಡಾಮಿನಿಕ್ ದ ರೋಜಾ ಎಂಬಾತ ಬಂಗಾಳಿಯಲ್ಲಿ ಮೊದಲನೆಯ ಕ್ರಿಶ್ಚಿಯನ್ ಗ್ರಂಥವನ್ನು ಬರೆದನೆಂದು ಹೇಳಲಾಗಿದೆ. ಈಗ ಉಪಲಬ್ಧವಿಲ್ಲ. ಹಿಂದೆ ಹೇಳಿರುವ ಎನ್. ಬಿ. ಹಾಲ್‍ಹೆಡ್ ಎಂಬಾತನ ವ್ಯಾಕರಣ ಪತ್ರಗಳು ಮತ್ತು ಲಾಟಿನ ಲಾಟರ್ಸ್‍ನಲ್ಲಿರುವ ಮತೀಯ ಲೇಖನಗಳು ಮಾತ್ರ. ಹತ್ತೊಂಬತ್ತನೆಯ ಶತಮಾನಕ್ಕೆ ಮುಂಚೆ ಕೆಲವು ಗದ್ಯ ಕಥೆಗಳನ್ನು ಮಾತ್ರ ರಚಿಸಲಾಗಿತ್ತು. ಕಲ್ಕತ್ತೆಯ ಹತ್ತಿರವಿರುವ ಸೆರಾಂಪುರದಲ್ಲಿಯ ಬ್ರಿಟಿಷ್ ಪ್ರಾಟೆಸೈಂಟ್ ಮಿಷನರಿಗಳು ಕ್ರಿಶ್ಚಿಯನ್ನರ ಪವಿತ್ರ ಗ್ರಂಥಗಳ ಭಾಷಾಂತರಗಳನ್ನೂ ಜತೆಗೆ ಕೆಲವು ಬಂಗಾಳೀ ಪ್ರೌಢಸಾಹಿತ್ಯ ಕೃತಿಗಳನ್ನೂ ಮುದ್ರಿಸಲು ಮೊದಲು ಮಾಡಿದರು (1800ರಿಂದ ಮುಂದಕ್ಕೂ). ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಅಧಿಕಾರಿಗಳಿಗೆ ಭಾರತೀಯ ಭಾಷೆಗಳನ್ನು ಕಲಿಸಲು ತಕ್ಕ ಗದ್ಯ ಬರೆಯಲು ಪೋರ್ಟ್ ವಿಲಿಯಮ್ ಕಾಲೇಜಿನಲ್ಲಿ ಕೆಲವು ಬಂಗಾಳೀ ಉಪಾಧ್ಯಾಯರನ್ನು ನಿಯೋಜಿಸಲಾಯಿತು. ಉದಾಹರಣೆಗೆ ರಾಜಾಪ್ರತಾಪಾದಿತ್ಯ ಚರಿತೆ (1801-ಲಂಡನ್ನಿನಲ್ಲಿ ಬಂಗಾಳೀ ಅಕ್ಷರಗಳಲ್ಲಿ ಮುದ್ರಿತವಾದುದು) ಎಂಬ ಗ್ರಂಥ ಬರೆದ ರಾಮರಾಮವಸು ಮತ್ತು ಪುರುಷ ಪರೀಕ್ಷೆ ರಚಿಸಿದ ಮೃತ್ಯುಂಜಯ ವಿದ್ಯಾಲಂಕಾರ. 1818ರಲ್ಲಿ ವಿಲಿಯಮ್ ಕ್ಯಾರಿ ಎಂಬಾತ ಸೆರಾಂಪುರದಲ್ಲಿ ಸಮಾಚಾರ ದರ್ಪಣವೆಂಬ ಪತ್ರಿಕೆ ಹೊರಡಿಸಿದಂದಿನಿಂದ ಬಂಗಾಳೀ ಪತ್ರಿಕೋದ್ಯಮ ಪ್ರಾರಂಭಗೊಂಡಿತು. ಇದರಿಂದಾಗಿ 1825ರ ಹೊತ್ತಿಗೆ ಬಂಗಾಳಿಯಲ್ಲಿ ಒಂದು ಸಮರ್ಥ ಗದ್ಯಶೈಲಿ ರೂಪಿತವಾಯಿತು.

ಮುಸ್ಲಿಮ್ ಲೇಖಕರ ಕೈಯಲ್ಲಿ ಪದ್ಯರಚನೆ ವಿಕಾಸಗೊಂಡಿತು. ರಂಗಪುರ ಜಿಲ್ಲೆಯ ಹಯಾತ್ ಮಹ್‍ಮುದ್ ಎಂಬಾತ ನಾಲ್ಕು ಕವಿತೆಗಳನ್ನು ಬರೆದ. ಅನ್‍ಬಿಯಾ ವಾಣೀ (ಪ್ರವಾದಿಗಳ ಉಪದೇಶ). ಮಹರಮ್ ಪರ್ವ ಅಥವಾ ಜಂಗ್‍ನಾಮಾ (1823-24) ಎಂಬ ಕರ್‍ಬಲಾವಿನ ದುರಂತ ಕಥೆ, ಸಂಸ್ಕøತ ಹಿತೋಪದೇಶ ಪರ್ಷಿಯನ್ ಅನುವಾದದ ಬಂಗಾಳೀ ರೂಪವಾದ ಚಿತ್ತುಉತ್ಥಾನ (1732-33), ಮುಸ್ಲಿಮ್ ಅಥವಾ ಸೂಫಿûೀ ಅಂತರ್ದರ್ಶನದ ಮೇಲಿನ ಹೇತುಜ್ಞಾನ-ಇವು ಆ ನಾಲ್ಕು ಕವಿತೆಗಳು. ಚಿಟ್ಟಗಾಂಗಿನ ನಸರುಲ್ಲಾಖಾನ್ ಮತ್ತು ಬಸಿರ್‍ಹಾಟ್ ಎಂಬಲ್ಲಿಯ ಯಾಕುಬ್ ಅಲೀ ಎಂಬಿಬ್ಬರೂ ಎರಡು ಜಂಗ್ ನಾಮೆಗಳನ್ನು ಬರೆದರು. ಚಿಟ್ಟಗಾಂಗಿನ ದೌಲತ್ ಪಜೀರ್ ಬಹ್ರಾಮ್ ಎಂಬಾತ ಲೈಲಾ ಮತ್ತು ಮಜುನು ಎಂಬುವರನ್ನು ಕುರಿತ ಅರಬ್ಬೀ ಪ್ರಣಯ ಕಥೆಯನ್ನು ಬರೆದರು. ಅಲ್ಲದೆ ಅರೇಬಿಯದ ಪ್ರವಾದಿಯ ಜೀವನ ಚರಿತ್ರೆ, ಇಸ್ಲಾಮೀ ತತ್ತ್ವದರ್ಶನ, ಹಿಂದೂ ತತ್ತ್ವದರ್ಶನದಲ್ಲಿ ಅದರ ಮಿಲನ ಮತ್ತು ಪರ್ಷಿಯ ಹಾಗೂ ಅರೇಬಿಯದ ಶೃಂಗಾರ ಕಥೆ ಮುಂತಾದ ವಸ್ತುಗಳ ಮೇಲೆ ಜೈನುದ್ದೀನ್ ಅಲಿರಾಜಾ (ವಾಲೀರಾಜಾ) ಷೆರಿಯಾರ್ ಮತ್ತು ಷಾಯ್‍ಖ್ ಸಾದೀ ಮುಂತಾದ ಬರಹಗಾರರು ರಚಿಸಿದ ಕೃತಿಗಳೂ ಇದ್ದುವು.

ಯೂರೋಪಿನ ಸಂಪರ್ಕದಿಂದ ಬಂಗಾಳದಲ್ಲಿ ಉಂಟಾದ ನವಜಾಗೃತಿ: ಹತ್ತೊಂಬತ್ತನೆಯ ಶತಮಾನದ ಪೂರ್ವಭಾಗದಲ್ಲಿ ಒಂದು ಬೌದ್ಧಿಕ ಪುನರ್ಭವ ನಿಜವಾಗಿ ಉಂಟಾಯಿತು. ಇದರಲ್ಲಿ ಇಂಗ್ಲಿಷ್ ಸಾಹಿತ್ಯ ಪ್ರಮುಖ ಪಾತ್ರ ಫಲವಾಗಿ ಸಂಸ್ಕøತ ಭಾಷೆಯ ಮೇಲೆ ಬಿದ್ದ ಹೊಸ ಬೆಳಕು ಸಹ ಜನರ ಮನಸ್ಸು ಮತ್ತು ಆತ್ಮಗಳೆರಡರಲ್ಲೂ ಒಂದು ಕ್ರಾಂತಿಯನ್ನೇ ತಂದಿತು. ಆಧುನಿಕ ಭಾರತದ ತಂದೆಯೆಂದು ಖ್ಯಾತನಾದ ರಾಜಾರಾಮ ಮೋಹನರಾಯ (1774-1883) ಭಾರತೀಯರಿಗೆ ತಾವು ಆಧುನಿಕ ಕಾಲಕ್ಕೆ ಹೊಂದಿಕೊಳ್ಳುವುದು ಅವಶ್ಯಕವೆಂಬುದನ್ನು ಮನದಟ್ಟಿಸಿದನಲ್ಲದೆ ಅದೇ ವೇಳೆ ಆಧುನಿಕ ಭಾರತಕ್ಕೆ ವೇದಾಂತ ಮತ್ತು ಉಪನಿಷತ್ತುಗಳ ಏಕದೇವತಾ ತತ್ತ್ವದರ್ಶನದ ನಿಧಿಯನ್ನು ತಂದುಕೊಟ್ಟ ಕೂಡ ಯೂರೋಪಿನ ಸಂಪರ್ಕದಿಂದ ಪುನರುಜ್ಜೀವಗೊಂಡ ಭಾರತದ ಪ್ರಥಮ ಬೌದ್ಧಿಕ ಹಾಗೂ ಸಾಂಸ್ಕøತಿಕ ಪ್ರಕಾಶಕ ಸಂಸ್ಥೆಯಾದ ಬ್ರಹ್ಮಸಮಾಜವನ್ನು ಸ್ಥಾಪಿಸಿದ. ಬಂಗಾಳೀ ಸಾಹಿತ್ಯ ಕ್ಷೇತ್ರದಲ್ಲಿ ಸಹ ಈತ ಅನೇಕ ಹೊಸ ದಾರಿ ತೆರೆದ. ಸಂಸ್ಕøತದಿಂದ ಉಪನಿಷತ್ತುಗಳನ್ನು ಬಂಗಾಳಿಗೆ ಭಾಷಾಂತರಿಸಿದ. ಬಂಗಾಳಿಗೊಂದು ವ್ಯಾಕರಣ ಬರೆದ (ಬಂಗಾಳೀ ದೇಶಿಯನೊಬ್ಬ ತನ್ನ ತಾಯಿನುಡಿಗರ್ಪಿಸಿದ ಪ್ರಥಮ ಕೃತಿ ಇದು). ಮತೀಯ ಹಾಗೂ ಸಾಮಾಜಿಕ ಎನಿಸಿದ ತನ್ನ ಅಭಿಪ್ರಾಯಗಳನ್ನು ತಿಳಿಸಲು ಚಿಕ್ಕ ಗ್ರಂಥಗಳನ್ನೂ ಲಘು ಪುಸ್ತಕಗಳನ್ನೂ ಪ್ರಕಟಿಸಿದ. ಎಲ್ಲಕ್ಕೂ ಮಿಗಿಲಾಗಿ ಇಂಗ್ಲಿಷ್ ಮತ್ತು ಸಂಸ್ಕøತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಕೊಟ್ಟನಲ್ಲದೆ ಹಿಂದೂ ಜನರು ಜೀವನದಲ್ಲಿ ಬೆರೆತುಹೋಗಿದ್ದ ಸತೀ ಮುಂತಾದ ಕ್ರೂರ ಪದ್ಧತಿಗಳನ್ನು ತೊಡೆದು ಹಾಕಲು ಪ್ರಯತ್ನಶೀಲನಾದ.

ರಾಜಾರಾಮಮೋಹನರಾಯರ ಗುರಿಗಳಿಗೂ ಧ್ಯೇಯಗಳಿಗೂ ವಿರೋಧವಾದ ಗುರಿ ಮತ್ತು ಧ್ಯೇಯಗಳನ್ನುಳ್ಳ ಹಿಂದೂ ಸಾಹಿತಿಗಳೂ ಇದ್ದರು. ಅವರ ಪೈಕಿ ಶಬ್ದಕಲ್ಪದ್ರುಮವೆಂಬ ಸಂಸ್ಕøತ ಮಹಾಶಬ್ದಕೋಶವನ್ನು ರಚಿಸಿದ ರಾಜಾರಾಧಾಕಾಂತದೇವ ಮತ್ತು ಭವಾನೀ ಚರಣವಂದೋಪಾಧ್ಯಾಯ ಬ್ಯಾನರ್ಜಿ (1787-1848) ಎಂಬ ಲೇಖಕರು ಪ್ರಮುಖರು. ಇವರಲ್ಲಿ ಎರಡನೆಯವ ಕಲ್ಕತ್ತೆಯ ಸಮಾಜದ ಮೇಲೆ ವಿಡಂಬನಾತ್ಮಕ ಪ್ರಬಂಧಗಳನ್ನು ಬರೆದನಲ್ಲದೆ ಸಂಸ್ಕøತದ ಪವಿತ್ರಗ್ರಂಥಗಳಲ್ಲಿ ಹಲವಾರನ್ನು ಭಾಷಾಂತರಿಸಿದ ಈ ಲೇಖಕರ ಶೈಲಿ ಸ್ವಲ್ಪ ಪೆಡಸು ಮತ್ತು ಸಂಸ್ಕøತ ಶಬ್ದಮಯ. ಆದರೆ 1850ರ ಹೊತ್ತಿಗೆ ಒಳ್ಳೆ ಚತುರವಾದ ಗದ್ಯಶೈಲಿ, ಮುಖ್ಯವಾಗಿ ಈಶ್ವರಚಂದ್ರ ವಿದ್ಯಾಸಾಗರ (1820-91). ಪ್ಯಾರೀಚಾಂದ ಮಿತ್ರ (1814-83) ಮತ್ತು ಅಕ್ಷಯ ಕುಮಾರದತ್ತ ಇವರ ಕೃತಿಗಳಲ್ಲಿ ಮೂಡಿಬಂದಿತು. ಈಶ್ವರಚಂದ್ರವಿದ್ಯಾಸಾಗರ ಬಂಗಾಳದ ಅಷ್ಟೇಕ ಅಖಿಲ ಭಾರತದ ಅತ್ಯಂತ ಶ್ರೇಷ್ಠ ಪುತ್ರದಲ್ಲಿ ಒಬ್ಬ. ಶಿಕ್ಷಣತಜ್ಞ. ಹಾಗೂ ಕಲ್ಕತ್ತೆಯ ಸಂಸ್ಕøತ ಕಾಲೇಜಿನ ಮುಖ್ಯಸ್ಥನಾದ ಈತ ಸಂಸ್ಕøತ ಕಾಲೇಜಿನ ಮುಖ್ಯಸ್ಥಾನದ ಈತ ಸಂಸ್ಕøತ ವಿದ್ಯಾಭ್ಯಾಸ ಕ್ರಮದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದನಲ್ಲದೆ ಈಗ ಆತನ ಹೆಸರಿನಲ್ಲೇ ನಡೆಸಲಾಗುತ್ತಿರುವ ಒಂದು ಕಾಲೇಜನ್ನು ಸಂಸ್ಥಾಪಿಸಿ ಇಂಗ್ಲಿಷ್ ವಿದ್ಯಾಭ್ಯಾಸ ಹರಡಲು ನೆರವಾದ. ಇಷ್ಟಲ್ಲದೆ ಈತ ಹೆಂಗಸರಿಗೂ ವಿದ್ಯೆ ಕಲಿಸಬೇಕೆಂಬ ಧ್ಯೇಯಕ್ಕೆ ತನ್ನ ಸಂಪೂರ್ಣ ಬೆಂಬಲಕೊಟ್ಟ. ಸಮಾಜಸುಧಾರಕನಾಗಿ ಈತ ಹಿಂದೂಗಳಲ್ಲಿ ವಿಧವೆಯರು ಪುನಃ ಮದುವೆಯಾಗುವುದನ್ನು ಕಾನೂನುಬದ್ಧವಾಗಿ ಮಾಡಬೇಕೆಂದು ವಾದಿಸಿ 1854ರಲ್ಲಿ ಬ್ರಿಟಿಷ್ ಸರ್ಕಾರದವರು ಒಂದು ಕಾನೂನು ಹೊರಡಿಸುವಂತೆ ಮಾಡಿದ. ಬಂಗಾಳಿಯಲ್ಲಿ ಒಳ್ಳೆಯ ಶೈಲಿ ಪಡೆದಿದ್ದ ಈತ ಸಂಸ್ಕøತದಿಂದಲೂ ಇಂಗ್ಲಿಷ್‍ನಿಂದಲೂ ಅನೇಕ ಕೃತಿಗಳನ್ನು ಭಾಷಾಂತರಿಸಿದ. ಬಂಗಾಳಿಗದ್ಯದ ಜನಕ ಎಂಬಷ್ಟು ಖ್ಯಾತಿ ಪಡೆಯುವಂಥ ಮನೋಹರವೂ ಪ್ರಸನ್ನವೂ ಆದ ಗದ್ಯ ಬರೆದು ಮಾರ್ಗದರ್ಶಕನಾದ. ಈತನ ಸರಳವೂ ತರ್ಕಬದ್ಧವು ಉಚಿತ ಸಂಸ್ಕøತ ಶಬ್ದಗಳಿಂದ ಕೂಡಿದವೂ ಅದ ವಾಕ್ಯ ತರಂಗಗಳು ಬಂಗಾಳೀ ಬರಹ ಸುಲಭವಾಗುವಂತೆ ಮಾಡಿದುವು. ಈತ ಬರೆದ ಪಠ್ಯ ಪುಸ್ತಕಗಳ ಮೂಲಕ ಬಂಗಾಳೀ ಜನ ತಮ್ಮ ವಿದ್ಯಾವ್ಯಾಸಂಗವನ್ನು ಪ್ರಾರಂಭಿಸುತ್ತಿದ್ದರು. ಪ್ಯಾರೀಚಾಂದಮಿತ್ರ ಎಂಬಾತ ಅಲಾಲೇರ ಘರೇರ ದುಲಾಲ (ಭಾಗ್ಯವಂತರ ಮನೆಯ ಅಶಿಕ್ಷಿತ ಪುತ್ರ, 1858) ಎಂಬ ಸಾಮಾಜಿಕ ಕಾದಂಬರಿ ಬರೆದ. ಇದು ತನ್ನ ವಸ್ತು ರೀತಿ, ಭಾಷೆಯ ಓಟ (ಇಲ್ಲಿ ಬಳಸಿರುವ ಭಾಷೆ ಕಲ್ಕತ್ತೆಯ ಜನ ಆಡುತ್ತಿದ್ದ ಭಾಷೆ) ಇವುಗಳಿಂದಾಗಿ ಒಂದು ವಿಲಕ್ಷಣ ಕೃತಿ ಎನಿಸಿದೆ. ಅನೇಕ ವಿಷಯಗಳ ಮೇಲೆ ಬರೆದ ಅಕ್ಷಯ ಕುಮಾರದತ್ತನ ಪ್ರಬಂಧಗಳು ಬಂಗಾಳೀ ಬರವಣಿಗೆ ಸುತರ್ಕವಾದ ಆಲೋಚನೆ ಮತ್ತು ತರ್ಕಬದ್ಧವಾದ ಗದ್ಯ ಲೇಖನಮಾರ್ಗದಲ್ಲಿ ಮುಂದುವರಿಯುತ್ತಿದೆ ಎಂಬುದನ್ನು ನಿರ್ದಿಷ್ಟವಾಗಿ ತೋರಿಸುತ್ತವೆ.

ಬಂಕಿಮಚಂದ್ರ ಮತ್ತು ಮಧುಸೂದನರ ಯುಗ: ಹಳೆಯ ಪಂಥಕ್ಕೆ ಸೇರಿದವರ ಪೈಕಿ ಕೊನೆಯವ ಈಶ್ವರಚಂದ್ರ ಗುಪ್ತ (1812-59), ಈತನೊಬ್ಬ ಕವಿ ಮತ್ತು ಪತ್ರಿಕಾಕರ್ತ (ಸಂವಾದ ಪ್ರಭಾಕರ ಎಂಬುದರ ಸಂಪಾದಕ). ಈತನ ತರುವಾಯ ಬಂಗಾಳೀ ಸಾಹಿತ್ಯದಲ್ಲಿ ಇಬ್ಬರು ಪ್ರಮುಖ ಬರಹಗಾರರು ಮುಂದಾಳುತನ ವಹಿಸಿಕೊಂಡರು. ಮೈಕೇಲ್ ಮಧುಸೂದನ ದತ್ತ (1823-73) ಮತ್ತು ಬಂಕಿಮಚಂದ್ರ ಚಟರ್ಜಿ (ಛಟ್ಟೋಪಾಧ್ಯಾಯ 1834-94). ಬಂಗಾಳೀ ಸಾಹಿತ್ಯದಲ್ಲಿ ಹತ್ತೊಂಬತ್ತನೆಯ ಶತಮಾನದ ಅಂತ್ಯಭಾಗವನ್ನು ಮಧುಸೂದನ ಬಂಕಿಮ್‍ಯುಗವೆಂದು ಕರೆಯುವುದು ವಾಡಿಕೆ. ಮಧುಸೂದನದತ್ತನ ಆತ್ಮ ಬಿಡುವನ್ನೇ ಕಾಣದಾಗಿತ್ತು. ಈತ ತರುಣ ಬಂಗಾಳದ ಆದರ್ಶ ಪ್ರತಿನಿಧಿಯಾಗಿದ್ದ. ಈತ ಮೊದಲು ಇಂಗ್ಲಿಷಿನಲ್ಲಿ ಬರೆಯತೊಡಗಿದ. ಅನಂತರ ತನ್ನ ತಾಯಿನುಡಿಯ ಸವಿ ಕಂಡುಕೊಂಡು ಅದರಲ್ಲಿ ತಕ್ಕಷ್ಟು ಯೋಗ್ಯತೆ ಗಳಿಸಲು ಯೂರೋಪಿನ ಅನೇಕ ಭಾಷೆ ಮತ್ತು ಅವುಗಳ ಸಾಹಿತ್ಯ ತಿಳಿಯಲು ಸ್ವತಃ ಅವನ್ನು ಅಭ್ಯಾಸ ಮಾಡಿದ. ಭಾರತೀಯ ಕಥಾವಸ್ತುಗಳನ್ನು ಭೂಮಂಡಲದ ಎಲ್ಲ ಜನಾಂಗಗಳಿಗೂ ಹಿಡಿಸುವ ರೀತಿಯಲ್ಲಿ ಯೂರೋಪಿಯನ್ ಸಾಹಿತ್ಯ ವಿಧಾನಗಳನ್ನು ಅನುಸರಿಸಿ ಈತ ಬರೆದ ಮೇಘನಾದವಧ (1861) ಕಾವ್ಯ ಮತ್ತು ರಾಧಾಕೃಷ್ಣರ ಕಥಾಪ್ರಸಂಗ ಕುರಿತ ವ್ರಜಾಂಗನಾ ಕಾವ್ಯವೆಂಬ ಸುಂದರ ಭಾವಗೀತೆಗಳು. ಈತ ಶ್ರೇಷ್ಠವಾದ ಸಾನೆಟ್ಟುಗಳನ್ನೂ ಐರೋಪ್ಯ ವ್ಯಾಸಂಗದ ಫಲವಾಗಿ ಉದಿಸಿದ ಸ್ಫೂರ್ತಿಯಿಂದಾಗಿ ನಾನಾ ರಸಗಳಲ್ಲಿ ಪರಿಣಾಮಕಾರಿಯಾದ ನಾಟಕಗಳನ್ನೂ ಬರೆದ.

ಕಾದಂಬರಿಕಾರ ಮತ್ತು ಪ್ರಬಂಧಕಾರ ಆದ ಬಂಕಿಮಚಂದ್ರ ಚಟರ್ಜಿಯನ್ನು ರವೀಂದ್ರನಾಥ ಠಾಕೂರನ ಪ್ರವೇಶಕ್ಕೆ ಮುಂಚಿನ ಅತ್ಯಂತ ಶ್ರೇಷ್ಠ ಲೇಖಕನೆಂದು ಪರಿಗಣಿಸಲಾಗಿದೆ. ಈತ ರಾಜಾ ಮೋಹನನ ಹೆಂಡತಿ ಎಂಬ ತನ್ನ ಮೊದಲನೆಯ ಕಾದಂಬರಿಯನ್ನು (1864) ಇಂಗ್ಲಿಷಿನಲ್ಲಿ ಪ್ರಾರಂಭಿಸಿದ. ಈತನ ಪ್ರಥಮ ಬಂಗಾಳೀ ಕಾದಂಬರಿ ದುರ್ಗೇಶನಂದಿನಿ. ಇದರ ವಸ್ತು ಪಠಾಣರಿಂದ ಬಂಗಾಳವನ್ನು ಮೊಘಲರು ಗೆದ್ದುಕೊಂಡ ಉದ್ರಿಕ್ತದಿನಗಳಲ್ಲಿಯ ಪ್ರಣಯ ಕಥೆ. ಇದನ್ನು ಅನುಸರಿಸಿ ಹನ್ನೆರಡಕ್ಕೂ ಹೆಚ್ಚಾದ ಐತಿಹಾಸಿಕ ಮತ್ತು ಸಾಮಾಜಿಕ ಕಾದಂಬರಿಗಳು ಒಂದಾದ ಮೇಲೊಂದು ಬಂದು ಈತನಿಗೆ ಬಂಗಾಳೀ ಸಾಹಿತ್ಯದಲ್ಲಿ ಒಂದು ಅಚಲ ಸ್ಥಾನವನ್ನು ಕೊಟ್ಟವಲ್ಲದೆ ಆಧುನಿಕ ಭಾರತದಲ್ಲಿ ರಚನಾತ್ಮಕವಾಗಿ ಆಲೋಚಿಸುವ ಮೇಧಾವಿಗಳ ಮತ್ತು ಬರಹಗಾರರ ಪಂಕ್ತಿಗೂ ಈತನನ್ನು ಸೇರಿಸಿದುವು. 1872ರಲ್ಲಿ ಈತ ವಂಗದರ್ಶನವೆಂಬ ಸಾಹಿತ್ಯ ಪತ್ರಿಕೆ ಪ್ರಾರಂಭಿಸಿದ. ಇದು ಬಂಗಾಳೀ ಸಾಹಿತ್ಯಕ್ಕೆ ಒಂದು ಹೊಸಕಳೆ ಕೊಟ್ಟಿತು. ಈತನ ಐತಿಹಾಸಿಕ ಕಾದಂಬರಿಗಳ ಪೈಕಿ, ರಾಜಸಿಂಹ ಮತ್ತು ಸೀತಾರಾಮ ಎಂಬವನ್ನು ಎತ್ತಿ ಹೇಳಬೇಕಾಗಿದೆ. ಸಾಮಾಜಿಕ ಕಾದಂಬರಿಗಳ ಪೈಕಿ ವಿಷವೃಕ್ಷ ಹಾಗೂ ಕೃಷ್ಣ ಕಾಂತೀರ ವಿಲ್ (ಕೃಷ್ಣಕಾಂತನ ಉಯಲು) ಎಂಬುವು ಅತ್ಯಂತ ಯಶಸ್ವಿಗಳಾಗಿವೆ. ಕಪಾಲಕುಂಡಲಾ ಎಂಬ ಕಾದಂಬರಿಯಲ್ಲಿ ಮನುಷ್ಯರಿಗೆ ದೂರವಾಗಿ ಒಂದು ಏಕಾಂತ ಸ್ಥಳದಲ್ಲಿ ವಾಸಮಾಡುವ ತಾಂತ್ರಿಕಯೋಗಿಯೊಬ್ಬ ಸಾಕಿ ಸಲಹಿದ ಹೆಣ್ಣೊಬ್ಬಳು ಮನ ಮೆಚ್ಚಿದವನನ್ನು ಮದುವೆಮಾಡಿಕೊಂಡು ಸುಖವಾಗಿರುವಾಗ ಅವಳನ್ನು ದುರಂತ ತನ್ನತ್ತ ಸೆಳೆದುಕೊಂಡು ಕಥೆ ಇದೆ. ಆನಂದಮಠದಲ್ಲಿ ವಂದೇಮಾತರಮ್ ಎಂಬ ಹಾಡುಬರುತ್ತದೆ. ಇದರ ಭಾಷೆ ಅರ್ಧ ಸಂಸ್ಕøತ ಅರ್ಧ ಬಂಗಾಳೀ. ಈ ಗೀತದ ಮೊದಲನೆಯ ಚರಣ ಸ್ವತಂತ್ರ ಭಾರತದ ಎರಡು ರಾಷ್ಟ್ರ ಗೀತೆಗಳ ಪೈಕಿ ಮೊದಲನೆಯದಾಗಿದೆ (ರವೀಂದ್ರನಾಥನ ಜನಗಣಮನ ಅಧಿನಾಯಕ ಎಂಬುದು ಎರಡನೆಯದು). ಇತಿಹಾಸದಲ್ಲೂ ಸುತ್ತಮುತ್ತಲಿನ ಜನಜೀವನದಲ್ಲೂ ಒಂದು ರಮ್ಯಾದ್ಭುತ ವಿಸ್ಮಯ ಈತನ ಕಾದಂಬರಿಗಳನ್ನೂ ಕಥೆಗಳನ್ನೂ ಓದುವುದರಿಂದ ಉಂಟಾಗುತ್ತದೆ. ಈತ ತನ್ನ ಜನರ ಬುದ್ಧಿಯನ್ನೂ ಪ್ರತಿಭೆಯನ್ನೂ ಪ್ರಚೋದಿಸಿದ. ಈತನಿಗೆ ಜನ ಸಮುದಾಯವನ್ನು ಕಂಡರೆ ಗಾಢ ಮಮತೆ. ತನ್ನ ಜನರಲ್ಲಿ ದೇಶವಾತ್ಸಲ್ಯ ಉಕ್ಕಿಸಬೇಕೆಂದೂ ಇದು ತನ್ನ ಜೀವನವ್ರತವೆಂದೂ ಈತ ಭಾವಿಸಿದ್ದ. ಮುಂದೆ ಬಂಗಾಳದಲ್ಲಿಯೂ ಭಾರತದಲ್ಲೂ ಜನರ ಮನಸ್ಸಿನಲ್ಲಿ ರಾಷ್ಟ್ರೀಯ ಮತ್ತು ರಾಜಕೀಯ ಪ್ರಜ್ಞೆ ಬೆಳೆಯಲು ಈತನ ಬರಹಗಳು ಪ್ರಚಂಡವಾದ ಸ್ಫೂರ್ತಿ ಇತ್ತುವು.

ವೇದಾಂತವನ್ನೂ ಮತ್ತು ತನ್ನ ಗುರುವಾದ ಮಹಾಶ್ರೇಷ್ಠಯೋಗಿ ರಾಮಕೃಷ್ಣನ ಉಪದೇಶಗಳನ್ನೂ ಅವಲಂಬಿಸಿ ಹಿಂದೂಮತವನ್ನು ತೀವ್ರವಾಗಿ ಪ್ರತಿಪಾದಿಸುತ್ತ. ದೀನದಲಿತದ ಮತ್ತು ದರಿದ್ರರ ಸೇವೆಯಲ್ಲಿ ನಿರತನಾಗಿ ಭಾರತೀಯ ಪುನರುತ್ಥಾನದಲ್ಲಿ ಮುಖ್ಯ ಪಾತ್ರವಹಿಸಿದ ಮತೊಬ್ಬ ಭಾರತೀಯ ಮಹಾವ್ಯಕ್ತಿ ಸ್ವಾಮಿ ವಿವೇಕಾನಂದ (1862-1902). ಈತ ಭಾರತದ ಮೂಕ ದುಃಖೀ ಜನ ಸಮೂಹವನ್ನು ದರಿದ್ರನಾರಾಯಣ ಎಂದು ಕರೆದು ಅವರಿಗೆ ಮೇಲ್ಮೆಯನ್ನು ತರುವುದೇ ತನ್ನ ಜೀವಿತದ ಮುಖ್ಯಧ್ಯೇಯವಾಗಿ ಮಾಡಿಕೊಂಡ (ಮುಂದೆ ಮಹಾತ್ಮಾಗಾಂಧಿ ದಲಿತ ಜನರನ್ನು ವರ್ಣಿಸುವುದಕ್ಕೆ ಹಳೆಯ ಹರಿಜನ ಎಂಬ ಪದವನ್ನು ಎತ್ತಿಕೊಂಡು ಅದಕ್ಕೊಂದು ಹೊಸ ಜೀವಕಳೆ ಕೊಟ್ಟ ಪ್ರಸಂಗಕ್ಕೆ ಇದು ನಾಂದಿಯೆಂಬಂತಿದೆ). ಈತ ಬಂಗಾಳೀ ಗದ್ಯ ಮತ್ತು ಪದ್ಯ ರಚನೆಗಳೆರಡರಲ್ಲೂ ತುಂಬ ಸಮರ್ಥ.

ರಂಗಲಾಲ ವಂದೋಪಾಧ್ಯಾಯ (ಬ್ಯಾನರ್ಜಿ 1827-87) ರಜಪೂತವೀರ ಶ್ರೇಷ್ಠರ ಕತೆಗಳನ್ನು (ಪದ್ಮಿನಿ-1858), ಕರ್ಮದೇವಿ-1862 ಮತ್ತು ಸುರಸುಂದರಿ-1868), ವಸ್ತುವಾಗಿ ತೆಗೆದುಕೊಂಡು ತುಂಬ ಮನೋಹರವಾದ ರಮ್ಯ ಕವಿತೆಗಳನ್ನು ರಚಿಸಿದನಲ್ಲದೆ ಒರಿಸ್ಸಾ ದೇಶದ ಇತಿಹಾಸದಿಂದ ಒಂದು ಸುಂದರ ಪ್ರಣಯ ಪ್ರಸಂಗವನ್ನು ತೆಗೆದುಕೊಂಡು ಸ್ವಾರಸ್ಯವಾಗಿ ನಿರೂಪಿಸಿದ ಕೂಡ (ಕಾಂಚೀಕಾವೇರಿ-1879). ಈತ ಕಾಳಿದಾಸನ ಕುಮಾರ ಸಂಭವವನ್ನು ಬಂಗಾಳೀ ಪದ್ಯದಲ್ಲಿ ಭಾಷಾಂತರಿಸಿದ್ದಾನೆ. ಇಷ್ಟು ವರ್ಣನಾಸಾಮಥ್ರ್ಯವುಳ್ಳ ಹಾಗೂ ಪ್ರಣಯ ಸಾಹಸಗಳ ಸ್ವಾರಸ್ಯವನ್ನು ಅನುಭವಿಸಿ ಹೇಳಬಲ್ಲ ಲೇಖಕ ಬಂಗಾಳದಲ್ಲಿ ಹಿಂದೆ ಹುಟ್ಟಿರಲಿಲ್ಲ. 1829ರಲ್ಲಿ ಜೇಮ್ಸ್ ಟಾಡ್ ಎಂಬ ಇಂಗ್ಲಿಷ್ ಕರ್ನಲ್ ತನ್ನ ದಿ ಅನಾಲ್ಸ್ ಅಂಡ್ ಅಂಟಿಕ್ವಿಟೀಸ್ ಆಫ್ ರಾಜಸ್ಥಾನ್ ಎಂಬ ರಜಪೂತರ ಇತಿಹಾಸ ಮತ್ತು ಸಾಹಸಗಳನ್ನು ವರ್ಣಿಸುವ ಪ್ರಖ್ಯಾತ ಪುಸ್ತಕವನ್ನು ಎರಡು ಸಂಪುಟಗಳಲ್ಲಿ ಲಂಡನ್ನಿನಲ್ಲಿ ಪ್ರಕಟಿಸಿದೆ. ಈ ಪುಸ್ತಕದಲ್ಲಿ ಈತ ರಜಪೂತರ ಶ್ರೇಷ್ಠ ಗುಣಗಳನ್ನು ಉಜ್ಜ್ವಲವಾಗಿ ಕೊಂಡಾಡಿದ. ಇದು ಬಂಗಾಳಿಗೆ ಭಾಷಾಂತರವಾಗಿ ಪ್ರಣಯ ಮತ್ತು ಸಾಹಸ ಕಥೆಗಳ ಗಣಿಯಾಯಿತು. ರಾಮಾಯಣ ಮತ್ತು ಮಹಾಭಾರತಗಳ ಜತೆಗೆ ಸಾಲುಗೊಂಡು ಜನರ ಮನಸ್ಸಿನಲ್ಲಿ ಶ್ರೇಷ್ಠ ಸ್ಥಾನ ಪಡೆಯಿತು. ಬಂಗಾಳ ಮತ್ತು ಭಾರತದ ಇತರ ಪ್ರದೇಶಗಳ ಅನೇಕ ಪ್ರಣಯ ಸಾಹಸಗಳನ್ನು ವರ್ಣಿಸುವ ಸಾಹಿತ್ಯ ಕೃತಿಗಳ ಮೇಲೆ ಕರ್ನಲ್ ಟಾಡನ ಪುಸ್ತಕವೇ ನೇರವಾಗಿ ಪ್ರಭಾವವನ್ನು ಬೀರಿದೆ. ರಜಪೂತ ವೀರಶ್ರೇಷ್ಠರ ಮೇಲೆ ರಂಗಲಾಲ ಬರೆದ ಪದ್ಯಗಳು ತನ್ನ ಜನರ ಸಂಸ್ಕøತಿಯ ಮೇಲಣ ಪ್ರೇಮ ಒಂದು ಮಹಾಧ್ಯೇಯಕ್ಕಾಗಿ ಸರ್ವಸ್ವತ್ಯಾಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇಶಭಕ್ತಿ ಇವನ್ನು ಜನರಿಗೆ ಉಪದೇಶಿಸಿದವು.
ದೀನಬಂಧು ಮಿತ್ರ (1830-73) ಬಂಗಾಳೀ ನಾಟಕ ರೂಪಿಸಿದವರಲ್ಲಿ ಒಬ್ಬ ಈತ ಜನಪ್ರಿಯ ಕೆಲವು ಹರ್ಷನಾಟಕಗಳನ್ನು ಬರೆದಿದ್ದಾನೆ ಮತ್ತು ಈತನ ನಾಟಕಗಳಲ್ಲಿ ಒಂದಾದ ನೀಲದರ್ಪಣ (ಡಕ್ಕ, 1860) ಇಂಡಿಗೋ ಗಿಡವನ್ನು (ನೀಲಿ ಬಣ್ಣಕ್ಕಾಗಿ ಬೆಳೆಯುವ ಗಿಡ) ಬೆಳೆಸುವ ಉದ್ಯಮದಲ್ಲಿ ತೊಡಗಿದ್ದ ಐರೋಪ್ಯ ಉದ್ಯಮ ವ್ಯವಸ್ಥೆಯಲ್ಲಿಯ ದೋಷಗಳನ್ನು ಎತ್ತಿತೋರಿ ಅವನ್ನು ತೊಡೆದು ಹಾಕಲು ಸಹಾಯಕವಾಯಿತು.

ರಾಜ ರಾಜೇಂದ್ರಲಾಲ ಮಿತ್ರ (1822-91) ಒಬ್ಬ ಇತಿಹಾಸಕರ ಮತ್ತು ಪ್ರಥಮ ಬಂಗಾಳೀ ಪ್ರಾಚೀನಾನ್ವೇಷಕ. ಈತ ಎಲ್ಲರಿಗೂ ಬೇಕಾದ ತುಂಬ ಉಪಯುಕ್ತವಾದ ವಿವಿಧಾರ್ಥ ಸಂಗ್ರಹ ಎಂಬ ಪತ್ರಿಕೆಯನ್ನು ಯೂರೋಪಿನ ಮಹಾಕೃತಿಗಳ ಭಾಷಾಂತರಗಳೊಂದಿಗೆ ಪ್ರಕಟಿಸಿದ.

ಭೂದೇವ ಮುಖೋಪಾಧ್ಯಾಯ (ಮುಕರ್ಜಿ, 1827-94): ಒಬ್ಬ ಗದ್ಯ ಲೇಖಕ ಮತ್ತು ಪತ್ರಿಕೋದ್ಯಮಿ ಈತ ಪೂರ್ವ ಮತ್ತು ಪಶ್ಚಿಮಗಳೆರಡನ್ನು ಸಮರಸಗೊಳಿಸುವುದರಲ್ಲಿ ತೊಡಗಿ ಹಿಂದೂ ಸಂಸ್ಕøತಿಯ ಶ್ರೇಷ್ಠಾಂಶಗಳನ್ನು ಸಂರಕ್ಷಿಸಲು ಬಯಸಿದ. ಸಮಾಜ ಮತ್ತು ಸಂಸ್ಕøತಿಯ ರಕ್ಷಣೆ ಮತ್ತು ಪುನಾರಚನೆಗಳ ವಿಷಯದಲ್ಲಿ ಈತ ಬರೆದಿರುವ ಪ್ರಬಂಧಗಳ ಅನೇಕ ಸಂಪುಟಗಳು ವಿಷಯದಲ್ಲಿ ಈತ ಬರೆದಿರುವ ಪ್ರಬಂಧಗಳ ಅನೇಕ ಸಂಪುಟಗಳು ತುಂಬ ಬೆಲೆಯುಳ್ಳವು. ಕಾಳೀಪ್ರಸನ್ನಸಿಂಹ (1840-70) ಸಂಪ್ರದಾಯನಿಷ್ಠ ಹಿಂದೂ ಸಮಾಜದಲ್ಲಿಯ ಮತ್ತೊಬ್ಬ ಪ್ರಗತಿಶೀಲ ಲೇಖಕ. ಈತ ಎರಡು ಸಂಸ್ಕøತ ನಾಟಕಗಳನ್ನು ಭಾಷಾಂತರಿಸಿದ್ದಾನೆ. ಈತನ ಹುತೋಪು ಪಂಚಾರ ನಕ್ಷಾ, (ಘೂಂಕರಿಸುವ ಗೂಬೆಯ ರೇಖಾ ಚಿತ್ರಗಳು) ಎಂಬ ಕೃತಿ ಬಂಗಾಳೀ ಪ್ರೌಢಗ್ರಂಥಗಳ ಪೈಕಿ ಒಂದಾಗಿದೆ.

ವಿಹಾರೀಲಾಲ ಚಕ್ರವರ್ತಿ (1835-94): ಪ್ರತಿಭೆಯನ್ನು ಹೊಸದಾರಿಯೊಂದರಲ್ಲಿ ಓಡಿಸಿ ಹೊಸಧ್ವನಿಗಳನ್ನು ಜೋಡಿಸಿ ಪದ್ಯಗಳನ್ನು ಬರೆದ. ರವೀಂದ್ರನಾಥ ಠಾಕೂರರು ವಿಹಾರೀಲಾಲನಿಗೆ ತಾನು ಋಣಿ ಎಂದು ಹೇಳಿಕೊಂಡಿದ್ದಾರೆ. ಹೇಮಚಂದ್ರ ವಂದ್ಯೋಪಾಧ್ಯಾಯ (ಬ್ಯಾನರ್ಜಿ, 1838-1903) ಷೇಕ್ಸ್ ಪಿಯರನ ರೋಮಿಯೋ ಮತ್ತು ಜ್ಯೂಲಿಯಟ್ಟನ್ನು ಭಾಷಾಂತರಿಸಿದ. ಆತನ ಮಿತ್ರ ಸಂಹಾರವೆಂಬ ಮಹಾಕಾವ್ಯ ಮಧುಸೂದನನ ಮೇಫನಾದವಧ ಕಾವ್ಯದಿಂದ ಪ್ರೇರಿತವಾಗಿದೆ. ಈತ ಉಜ್ಜ್ವಲ ದೇಶಪ್ರೇಮಿ ನವೀನ ಚಂದ್ರಸೇನ ಮಧುಸೂದನ ದತ್ತನಿಗೆ ಎರಡನೆಯವನೆಂದು ಭಾವಿಸಲಾಗಿದೆ. ನವೀನ ಚಂದ್ರಸೇನ (1847-1909) ಕೆಲವು ದೀರ್ಘ ಕವಿತೆಗಳನ್ನು ಬರೆದ. ಇವುಗಳಲ್ಲಿ ಕೃಷ್ಣನ ಉಪದೇಶಗಳಿಗೆ (ಕುರುಕ್ಷೇತ್ರ, ರೈವತಕ, ಪ್ರಭಾಸ) ಹೊಸ ಅರ್ಥ ಕಲ್ಪಿಸಿದ್ದಾನೆ. ಈತ ಮೂರು ದೊಡ್ಡ ಪದ್ಯಗಳಲ್ಲಿ (ಅಮಿತಾಭ ಕ್ರಿಸ್ತ, ಅಮೃತಾಭ) ಅನುಕ್ರಮವಾಗಿ ಬುದ್ಧ, ಕ್ರಿಸ್ತ, ಚೈತನ್ಯರ ಜೀವನಚರಿತ್ರೆ ಚಿತ್ರಿಸಿದ್ದಾನೆ. ಜತೆಗೆ ರಂಗಮತೀ ಎಂಬ ಪ್ರಣಯ ಸಾಹಸದ ಶೃಂಗಾರ ಕಥೆಯನ್ನೂ ಬಂಗಾಳದಲ್ಲಿ ಇಂಗ್ಲಿಷರ ಆಡಳಿತ ನೆಲೆಗೊಂಡದರ ಮೇಲೆ ಪಲಾಸೀರ ಯುದ್ಧವೆಂಬ ಐತಿಹಾಸಿಕ ಪದ್ಯವನ್ನೂ ರಚಿಸಿದ್ದಾನೆ. ಈತನ ಬರಹಗಳ ಅನೇಕ ಮುಖವಾಗಿವೆ. ಭಾನುಮತಿ ಎಂಬ ಕಾದಂಬರಿ ಸಹ ಈತನಿಂದ ರಚಿತವಾಗಿದೆ. ಈತ ತೀರಿಕೊಂಡ ಮೇಲೆ ಪ್ರಕಟವಾದ ಈತನ ಜೀವನ ಚರಿತ್ರೆ (ಅಮಾರ ಜೀವನ) ಸೊಗಸಾಗಿ ಓಡುತ್ತದೆ. ವ್ಯಕ್ತಿಗಳ ಮತ್ತು ಅವರ ನಡತೆಗಳ ವಿಚಾರದಲ್ಲಿ ಈತನ ತಿಳಿವಳಿಕೆ ತುಂಬ ಕುಶಲ ಮತ್ತು ಒಳಹೊಕ್ಕು ನೋಡುವಂಥದು.

ರಾಜಕೃಷ್ಣರಾಯ (1852-95) ಅನೇಕ ಗ್ರಂಥಗಳನ್ನು ಬರೆದಿರುವ ಲೇಖಕ. ಈತ ಪದ್ಯವ್ಯಾಸಂಗಕ್ಕೆ ಮೀಸಲಾದ ಪತ್ರಿಕೆಯೊಂದರ ಸಂಪಾದಕನಾಗಿದ್ದನಲ್ಲದೆ ಒಂದು ನಾಟಕ ಕಂಪನಿಯ ನಿರ್ದೇಶಕನೂ ಆಗಿದ್ದ. ಈತನ ನಾಟಕಗಳು ತುಂಬ ಜನಪ್ರಿಯವಾಗಿದ್ದುವು. ಅನೇಕ ವಿಷಯಗಳ ಮೇಲೆ ಬರೆದಿರುವ ಈತನ ಕವಿತೆಗಳೂ ಗಮನಾರ್ಹವಾಗಿವೆ. ರಾಮಾಯಣ ಮತ್ತು ಮಹಾಭಾರತಗಳನ್ನು ಸಂಪೂರ್ಣವಾಗಿ ಭಾಷಾಂತರಿಸಿದ್ದಾನೆ (ರೂಪಾಂತರಣ/ಪರಿವರ್ತನೆ ಅಲ್ಲ).

ರವೀಂದ್ರನಾಥನ ಅಣ್ಣನಾದ ದ್ವಿಜೇಂದ್ರನಾಥ ಠಾಕೂರ್ (1820-1926) ತನ್ನ ಕಾಲದ ಶ್ರೇಷ್ಠ ವ್ಯಕ್ತಿಗಳ ಪೈಕಿ ವಿಲಕ್ಷಣನಾದವ. ಈತನೊಬ್ಬ ಕವಿ, ಚಿತ್ರಕಾರ, ಸಂಗೀತಗಾರ ಹಾಗೂ ಮಾನವತಾಪ್ರೇಮಿ. ದಾರ್ಶನಿಕ, ವೇದಾಂತಿ. ಈತನ ಕೃತಿಗಳ ಪೈಕಿ ಸ್ವಪ್ನಪ್ರಯಾಣ (1875) ಎಂಬುದೊಂದು ಸಾಂಕೇತಿಕ ಕವಿತೆ. ಇದು ತನ್ನ ಮೂಲ ಭಾವ ಮತ್ತು ಪ್ರಕಟಣ ಸ್ವರೂಪ ಎರಡರಲ್ಲೂ ಸ್ವೋಪಜ್ಞವಾಗಿದೆ. ಇದರ ಶೈಲಿ ಅರ್ಥ ಮತ್ತು ಪಾರಮಾರ್ಥಿಕ ಭಾವನೆಗಳು ಮನೋಹರವಾಗಿವೆ.

ರವೀಂದ್ರನಾಥನ ಐದನೆಯ ಅಣ್ಣನಾದ ಜೋತಿರಿಂದ್ರನಾಥ (1848-1925) ಮತ್ತೊಬ್ಬ ಸಾಹಿತಿ. ಈತನ ನಾಲ್ಕು ಸ್ವೋಪಜ್ಞ ನಾಟಕಗಳು ಅಲೆಕ್ಸಾಂಡರ್ ಮತ್ತು ಪೋರೆಸ್ ಎಂಬವರನ್ನು ಕುರಿತ ಪುರುಷ ವಿಕ್ರಮ (1874); ಅಲ್ಲಾವುದ್ದೀನನ ಚಿತ್ತೂರಿನ ಮುತ್ತಿಗೆಯನ್ನು ಕುರಿತ ಸರೋಜಿನಿ (1875); ಅಕ್ಬರ್ ಮತ್ತು ಮೇವಾಡದ ಪ್ರತಾಪ ಸಿಂಹನ ಕಾಲದ ವಸ್ತುವನ್ನು ಕುರಿತ ಅಶ್ರುಮತಿ (1870); 18ನೆಯ ಶತಮಾನದ ಬಂಗಾಳದ ಒಂದು ಪ್ರಸಂಗವನ್ನು ಕುರಿತ ಸ್ವಪ್ನಮಯೀ (1882) ಬಹಳ ಜನಪ್ರಿಯವಾಗಿದ್ದುವು. ಸಂಸ್ಕøತದ ಪ್ರಧಾನ ನಾಟಕಗಳ ಬಹು ಭಾಗವನ್ನು ಈತ ಭಾಷಾಂತರಿಸಿದ್ದಾನೆ. ಈತನ ಫ್ರೆಂಚ್, ಇಂಗ್ಲಿಷ್ ಮತ್ತು ಮರಾಠಿ ಭಾಷಾಂತರಗಳು ಬಂಗಾಳೀ ಸಾಹಿತ್ಯದ ಎಲ್ಲೆಯನ್ನು ವಿಸ್ತರಿಸಿವೆ.

ರಮೇಶಚಂದ್ರದತ್ತ (1848-1909): ಹಿಂದೂ ನಾಗರಿಕತೆಯ ಇತಿಹಾಸಕಾರನಾಗಿ, ಋಗ್ವೇದ ಸಂಹಿತೆಯನ್ನು ಬಂಗಾಳಿಗೆ ಭಾಷಾಂತರಿಸಿದವನಾಗಿ ಭಾರತೀಯ ಅರ್ಥಶಾಸ್ತ್ರದ ಲೇಖಕನಾಗಿ ಮತ್ತು ಶ್ರೇಷ್ಠ ಕಾದಂಬರಿಕಾರನಾಗಿ, ಬಂಗಾಳೀ ಸಮಾಲೋಚನೆ ಕ್ಷೇತ್ರದ ಮುಂಗಾಳುಗಳಲ್ಲಿ ಒಬ್ಬನಾಗಿದ್ದಾನೆ. ಈತನ ಐತಿಹಾಸಿಕ ಕಾದಂಬರಿಗಳು (ರಾಜಪೂತ ಜೀವನ ಸಂಧ್ಯಾ: ಮಹಾರಾಷ್ಟ್ರ ಜೀವನ ಪ್ರಭಾತ ಮತ್ತು ಮಾಧವೀ ಕಂಕಣ) ಮತ್ತು ಸಾಮಾಜಿಕ ಕಾದಂಬರಿಗಳು (ಸಂಸಾರ ಮತ್ತು ಸಮಾಜ) ಪ್ರಖ್ಯಾತವಾಗಿವೆ.

ಗಿರೀಶಚಂದ್ರ ಘೋಷ (1814-1911): ಬಂಗಾಳದ ಅತ್ಯಂತ ಶ್ರೇಷ್ಠ ನಾಟಕಕಾರನೆಂದು ಪರಿಗಣಿತನಾಗಿದ್ದಾನೆ. ಈತ 90 ಐತಿಹಾಸಿಕ, ಸಾಮಾಜಿಕ, ಪೌರಾಣಿಕ ನಾಟಕಗಳನ್ನೂ ಪ್ರಹಸನಗಳನ್ನೂ ಮತ್ತು ಗದ್ಯ ರೇಖಾ ಚಿತ್ರಗಳನ್ನೂ ಬರೆದಿದ್ದಾನೆ. ಈತ ಶ್ರೇಷ್ಠ ನಟ ಹಾಗು ನಾಟಕಕಾರ. ಈತನ ಕೃತಿಗಳಲ್ಲಿ ಬಿಲ್ವ ಮಂಗಳ, ಪ್ರಫುಲ್ಲ, ಜನಾ, ಪಾಂಡವ ಕೌರವ, ಬುದ್ಧದೇವಚರಿತ, ಚೈತನ್ಯ ಲೀಲಾ; ಸಿರಾಜುದ್ಧೌಲ ಮತ್ತು ಅಶೋಕ ಎಂಬವು ಬಂಗಾಳಿಯಲ್ಲಿ ಶ್ರೇಷ್ಠವೂ ಅತ್ಯಂತ ಜನಪ್ರಿಯವೂ ಆಗಿರುವ ಕೃತಿಗಳು. ಈತ ಮಾಡಿರುವ ಷೇಕ್ಸ್ ಪಿಯರನ ಮ್ಯಾಕ್ ಬೆತ್ತಿನ ಭಾಷಾಂತರ ತುಂಬ ಯಶಸ್ವಿಯಾಗಿದೆ. ಈತನ ಕೃತಿಗಳಲ್ಲಿ ಭಕ್ತಿ ಶ್ರದ್ಧೆಗಳು ಗಾಢವಾಗಿವೆ. ತನ್ನ ಸಾಮಾಜಿಕ ನಾಟಕಗಳಲ್ಲಿ ಈತ ಆಶ್ಚರ್ಯಕರವಾದ ಸಾಮಥ್ರ್ಯದಿಂದಲೂ ವ್ಯಂಗ್ಯದ ಮಾತುಗಳಿಂದಲೂ ಸಮಾಜದ ದೋಷಗಳನ್ನು ಎತ್ತಿತೋರಿಸಿದ್ದಾನೆ, ಅಲ್ಲದೆ ಈತನ ಐತಿಹಾಸಿಕ ನಾಟಕಗಳು ಉಜ್ಜ್ವಲ ದೇಶಭಕ್ತಿಯಿಂದ ತುಂಬಿವೆ.

ಅಮೃತಲಾಲ ಬಸು(1853-1929): ನಟ ಹಾಗೂ ನಾಟಕಕಾರ. ಈತನ ನಗೆ ನಾಟಕಗಳೂ ಪ್ರಹಸನಗಳೂ ಜನಪ್ರಿಯವಾಗಿವೆ. ಈತನ ಎಲ್ಲ ಕೃತಿಗಳಲ್ಲೂ ಧ್ಯೇಯದ ಒಂದೆಳೆ ಹೆಣದುಕೊಂಡಿದೆ. ಬಂಗಾಳೀ ಜನರ ಹಳೆಯ ದಿನಗಳನ್ನು ಹೊಗಳುವುದರಲ್ಲಿ ಈತ ನಿಸ್ಸೀಮ.

ಸಂಸ್ಕøತ ವಿದ್ವಾಂಸ, ಇತಿಹಾಸಕಾರ ಮತ್ತು ಪ್ರಾಚೀನಾನ್ವೇಷಕನಾದ ಹರಿಪ್ರಸಾದ್ ಶಾಸ್ತ್ರೀ (1855-1931) ಶ್ರೇಷ್ಠ ಕಾದಂಬರಿಗಾರ, ಪ್ರಬಂಧಲೇಖಕ, ಈತ ಪೂರ್ವಕಾಲದ ಚರಿತ್ರೆಯನ್ನು ಅವಲಂಬಿಸಿರುವ ಕಾದಂಬರಿಗಳು, ಭಾರತೀಯ ಸಾಹಿತ್ಯ ಮತ್ತು ಸಂಸ್ಕøತಿಯ ಮೇಲಿನ ಲೇಖನಗಳು, ಪದ್ಮಗಂಧೀ ಗದ್ಯದಲ್ಲಿ ಬರೆದಿರುವ ವಾಲ್ಮೀಕಿರ ಜಯವೆಂಬ ಕಲ್ಪನಾವಿಲಾಸ-ಇವನ್ನು ಸುಂದರವೂ ಸಮರ್ಥವೂ ಆದ ಬಂಗಾಳಿಯಲ್ಲಿ ರಚಿಸಿದ್ದಾನೆ.

ರವೀಂದ್ರನಾಥರ ಯುಗ ಮತ್ತು ಮುಂದಕ್ಕೆ: ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಬಂಗಾಳದ ರಾಜಕೀಯದಲ್ಲಿ ರಾಜಕೀಯ ಹಾಗೂ ಸಾಂಸ್ಕøತಿಕವಾಗಿ ಒಂದು ಉತ್ಕ್ರಾಂತೀಯ ಸಂಭವಿಸಿತು. 1905ರಲ್ಲಿ ಲಾರ್ಡ್ ಕರ್ಸನ್ ಬಂಗಾಳಿ ಮಾತನಾಡುವ ಜನರ ಏಕತೆಯನ್ನು ಮುರಿದು ಬಂಗಾಳವನ್ನು ಎರಡು ಭಾಗವಾಗಿ ಒಡೆದಾಗ ಬಂಗಾಳಿಗಳು ಸಿಡಿದೆದ್ದರು. ಆಗ ದೇಶದ ರಾಜಕೀಯದಲ್ಲಿ ಕಲ್ಲೋಲ ಆರಂಭವಾಯಿತು. ಯುವಕ ರವೀಂದ್ರನಾಥರು ಮುಂದಾಳುತನ ವಹಿಸಿದರು. ಏತನ್ಮಧ್ಯೆ ರವೀಂದ್ರರ ಸಾಹಿತ್ಯ ಸೃಷ್ಟಿಗೆ ದೊರೆತ ನೊಬೆಲ್ ಬಹುಮಾನ (1913) ಬಂಗಾಳಿಗಳ ದೇಶಪ್ರೇಮವನ್ನು ದ್ವಿಗುಣಗಳಿಸಿತಲ್ಲದೆ ಬಂಗಾಳೀ ಸಾಹಿತ್ಯದಲ್ಲಿ ರವೀಂದ್ರರ ಯುಗವೇ ಆರಂಭವಾಯಿತು. ರವೀಂದ್ರನಾಥ ಠಾಕೂರ್ (1861-1941) ಅವರನ್ನು ಆ ವೇಳೆಗೆ ಬಂಗಾಳದ ಉದಯೋನ್ಮುಖ ಲೇಖಕರೆಂದು ಪರಿಗಣಿಸಲಾಗಿತ್ತು. ಕವಿತೆ, ನಾಟಕ, ಸಣ್ಣಕತೆ, ಕಾದಂಬರಿ, ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ಹೊಸ ನೀರನ್ನು ಹರಿಸಿ ತನ್ನ ಜನರ ಉತ್ಸಾಹವನ್ನು ಉಚ್ಛ್ರಾಯಗೊಳಿಸಿದರು. ಇವರ ಬರವಣಿಗೆಯಲ್ಲಿ ಪರಮ ಸೌಂದರ್ಯ ಪ್ರಕಟವಾಗಿ, ವಾಕ್ಪತಿ ಎಂದು ಕರೆಸಿಕೊಳ್ಳಲು ನಿಜವಾಗಿ ಅರ್ಹರಾದರು. ಇವರು ಶಾಂತಿನಿಕೇತನದ ಪಾಠಶಾಲೆಯನ್ನೂ ವಿಶ್ವಭಾರತಿ ಎಂಬ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಿದರು. ಹಳ್ಳಿಗಳ ಹಾಗೂ ಆ ಜನಗಳ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ಶ್ರೀನಿಕೇತನವೆಂಬ ಗ್ರಾಮ ಸಂಸ್ಥೆಯನ್ನು ಸಂಸ್ಥಾಪಿಸಿದರು. ಭಾರತೀಯ ಸಂಗೀತ ನಾಟಕ ಕಲೆ ಮತ್ತು ನೃತ್ಯ ಕಲೆಗಳಿಗೂ ಇವರ ಕೊಡುಗೆ ಅಪಾರ.

ರವೀಂದ್ರನಾಥರು ಕವಿ ಮತ್ತು ಲೇಖಕರು ಮಾತ್ರವಲ್ಲ. ಒಬ್ಬ ಸಮಗ್ರ ಪುರುಷ-ಪೂರ್ಣಮಾನವ-ಜೀವನದ ಅನೇಕ ಶಾಖೆಗಳಲ್ಲಿ ಇವರು ತಮ್ಮ ಮುದ್ರೆ ಒತ್ತಿದ್ದಾರೆ. ಅಂತರರಾಷ್ಟ್ರೀಯ ಪ್ರಜೆಯಾಗಿ, ಮಾನವ ಪ್ರೇಮಿಯಾಗಿ ಇವರು ಪ್ರಪಂಚದ ರಾಷ್ಟ್ರಗಳ ನಡುವೆ ಶಾಂತಿ ಸೌಹಾರ್ದ ಸಹಕಾರ ಕುದುರಿಸುವ ಮತ್ತು ಸಾಂಸ್ಕøತಿಕ ಆಧ್ಯಾತ್ಮಿಕ ಸಂಘಟನೆ ಉಂಟುಮಾಡುವ ಪ್ರಚಂಡ ಶಕ್ತಿಗಳಲ್ಲಿ ಒಂದು ಎನಿಸಿಕೊಂಡರು. ಇವರು ಆಧುನಿಕ ಕಾಲದ ಅತ್ಯಂತ ಬಂಗಾಳೀ ಹಾಗೂ ಭಾರತೀಯ ಸಾಹಿತಿ ಮಾತ್ರವಲ್ಲ-ಪ್ರಪಂಚದ ಅತ್ಯಂತ ಶ್ರೇಷ್ಠರ ಪೈಕಿ ಒಬ್ಬರು. ಇವರು ತೀವ್ರ ರಾಷ್ಟ್ರವಾದಿ. ಇವರ ಪ್ರಭಾವ ಅಗಾಧವಾದುದು. ಇಂಗ್ಲಿಷಿನಲ್ಲಿ ಇವರು ರಚಿಸಿದ ಕೃತಿಗಳು ಗೀತಾಂಜಲಿ (1912); ಚಿತ್ರಾ (1913); ಸಾಧನಾ (1914); ಸಾಂಗ್ಸ್ ಆಫ್ ಕಬೀರ್ (ಕಬೀರನ ಕೀರ್ತನೆಗಳು-1915); ಫ್ರೂಟ್ ಗಾದರಿಂಗ್ (ಫಲಸಂಗ್ರಹ-1916); ದಿ ಫ್ಯುಜಿಟಿವ್ (1921); ಕ್ರಿಯೆಟಿವ್ ಯೂನಿಟಿ (1922); ಫೈರ್‍ಫ್ಲೈಸ್ (ಮಿಣುಕುಹುಳುಗಳು (1928): ರಿಲಿಜನ್ ಆಫ್ ಮ್ಯಾನ್ (1930)-ಇತ್ಯಾದಿಗಳು.
ಠಾಕೂರರ ಸಮಕಾಲೀನರೆಂದರೆ 1. ಕವಿ ದೇವೇಂದ್ರನಾಥ ಸೇನ (1858-1926) 2. ಕವಿ ಅಕ್ಷಯ ಕುಮಾರ ಬಡಾಲ (1960-1919); 3. ಕವಿ ರಜನೀಕಾಂತ ಸೇನ (1865-1910) 4. ಕವಯಿತ್ರಿ ಶ್ರೀಮತಿ ಕಾಮಿನೀರಾಯ (1864-1933); 5. ಕಾದಂಬರೀ ಲೇಖಕಿ ಶ್ರೀಮತಿ ಸ್ವರ್ಣಕುಮಾರೀ ದೇವೀ (1855-1932); 6. ಪ್ರಬಂಧಕಾರ, ವಿಜ್ಞಾನಿ, ದಾರ್ಶನಿಕ ರಾಮೇಂದ್ರ ಸುಂದರ ತ್ರಿವೇದೀ (1864-1919): 7. ಭಾಷೆ ಮತ್ತು ಛಂದಸ್ಸುಶಾಸ್ತ್ರಗಳಲ್ಲಿ ಪ್ರಕಾಂಡಪಂಡಿತನೂ ಅಸಾಮಾನ್ಯ ಕವಿಯೂ ಆದ ಸತ್ಯೇಂದ್ರನಾಥದತ್ತ (1882-1922); 8. ಪಾತ್ರಗಳನ್ನು ನಿಜವೆನ್ನಿಸುವಂತೆಯೂ ಸಹಾನುಭೂತಿಯಿಂದಲೂ ಚಿತ್ರಿಸಿ ಕಾದಂಬರಿಗಳನ್ನೂ ಸಣ್ಣ ಕಥೆಗಳನ್ನೂ ಬರೆಯುತ್ತಿದ್ದ ಪ್ರಭಾತ ಕುಮಾರ ಮುಖೋಪಾಧ್ಯಾಯ (ಮುಕರ್ಜಿ: 1873-1932); 9. ಕವಿ ಮತ್ತು ನಾಟಕಕಾರ ದ್ವಿಜೇಂದ್ರ ಲಾಲರಾಯ (1863-1913); ಈತನ ಐತಿಹಾಸಿಕ ನಾಟಕಗಳು ಬಹು ಜನರ ಮೆಚ್ಚಿಗೆಯನ್ನೂ ಪಡೆದಿದ್ದವು. ಈತ ವಿಡಂಬನಗಳನ್ನೂ ಮತ್ತು ಹಾಸ್ಯದಿಂದ ಕೂಡಿದ ಪದ್ಯಗಳನ್ನೂ ಕೆಲವು ಜನಪ್ರಿಯ ರಾಷ್ಟ್ರೀಯ ಗೀತೆಗಳನ್ನೂ ಬರೆದಿದ್ದಾನೆ. (ಈತನ ಅನೇಕ ನಾಟಕಗಳು ಹಿಂದಿಗೂ ಇತರ ಭಾಷೆಗಳಿಗೂ ಪರಿವರ್ತಿತವಾಗಿವೆ); 10. ಕ್ಷೀರೋದ ಚಂದ್ರ ವಿದ್ಯಾವಿನೋದ (1864-1927): ಈತನೂ ಒಬ್ಬ ನಾಟಕಕಾರ, ಇಂಡಿಯಾದ ಹೊರಗಣ ಮುಸ್ಲಿಮ್ ಲೋಕದ ವಸ್ತುಗಳನ್ನೂ ಭಾರತೀಯ ಇತಿಹಾಸ ಮತ್ತು ನಾಟಕಗಳನ್ನು ಬರೆದಿದ್ದಾನೆ. 11. ಅತುಲ ಪ್ರಸಾದ ಸೇನ (1870-1954) ಮನೋಹರವಾದ ಗೀತೆಗಳನ್ನೂ ಭಾವಗೀತೆಗಳನ್ನೂ ರಚಿಸಿದ್ದಾನೆ, 12. ರಾಖಾಲದಾಸ ವಂದ್ಯೋಪಾಧ್ಯಾಯ (ಬ್ಯಾನರ್ಜಿ 1884-1930); ಇತಿಹಾಸಕಾರ, ಪ್ರಾಚೀನಾನ್ವೇಷಕ, ಮತ್ತು ಸ್ಫುಟವಾದ ಐತಿಹಾಸಿಕ ಕಾದಂಬರಿಗಳ ಲೇಖಕ; ಮತ್ತು 13. ಹೀರೇಂದ್ರನಾಥ ದತ್ತ (1868-1942): ದಾರ್ಶನಿಕ ಮತ್ತು ಪ್ರಬಂಧಕಾರ.

ಇಂದಿಗೂ ಬಂಗಾಳೀ ಮತ್ತು ಭಾರತೀಯ ಸಾಹಿತ್ಯ ಎರಡರಲ್ಲಿಯೂ ಪ್ರಧಾನವಾಗಿ ಕಾಣಬರುವ ಕಾದಂಬರಿಕಾರನೆಂದರೆ ಶರಶ್ಚಂದ್ರ ಚಟ್ಟೋಪಾಧ್ಯಾಯ (ಚಟರ್ಜಿ, 1876-1938). ಈತ ಅನೇಕ ಸಾಮಾಜಿಕ ಕಾದಂಬರಿಗಳನ್ನು (ಉದಾಹರಣೆಗೆ ಶ್ರೀಕಾಂತ) ಸರಳವೂ ಮನೋಹರವೂ ಆದ ಭಾಷೆಯಲ್ಲಿ ರಚಿಸಿದ. ಕೆಳಗೆ ಬಿದ್ದವರನ್ನು ಕಂಡರೆ ಸಹಾನುಭೂತಿ ಮತ್ತು ಬಿಚ್ಚು ಮಾತು ಇವು ಈತನಿಗೆ ಓದುಗರ ಮಮತೆಯನ್ನು ತಂದಿತ್ತವು. ಸಾಮಾಜಿಕ ಜೀವನದ ವ್ರಣಗಳನ್ನು ಶರಶ್ಚಂದ್ರ ಬಿಚ್ಚಿತೋರಿಸಿದ್ದಾನೆ. ಆದರೆ ಇಷ್ಟು ವಿಶ್ವಾಸಾರ್ಹವಾಗಿ ಚಿತ್ರಿಸಿದ ಸಮಾಜವನ್ನು ಮೇಲ್ಪಡಿಸಲು ಯಾವ ಪರಿಹಾರವನ್ನೂ ಈತ ಸೂಚಿಸಲರಿಯ. ಈತನ ಕಾದಂಬರಿಗಳು ಹೃದಯವನ್ನು ತಳಮಳಗುಟ್ಟಿಸುತ್ತವೆ; ಇವುಗಳಲ್ಲಿ ಕೆಲವನ್ನು ಶಿಶಿರ ಕುಮಾರ ಭಾದುಡೀ ಎಂಬ ನಟ-ನಾಟಕಕಾರ ರಂಗಕ್ಕೆ ಅಳವಡಿಸಿ ಆಡಿ ತೋರಿಸಿದ್ದಾನೆ. ರವೀಂದ್ರನಾಥ ಮತ್ತು ಬಂಕಿಮಚಂದ್ರರ ತರುವಾಯ ಅಖಿಲ ಭಾರತೀಯ ಸಾಹಿತ್ಯದ ಮೇಲೆ ಅತ್ಯಂತ ಪ್ರಭಾವವನ್ನು ಬೀರಿರುವವ ಶರಶ್ಚಂದ್ರ.

ಬಂಗಾಳೀ ಪ್ರಾಂತದಲ್ಲೆಲ್ಲ ಗದ್ಯಕ್ಕೆ ಉತ್ತಮ ದರ್ಜೆಯ ಬಂಗಾಳೀ ಭಾಷೆ ಬಳಕೆಯಲ್ಲಿದೆ. ಆದರೆ ಕಲ್ಕತ್ತೆಯ ಜನರ ಆಡುಮಾತಿನಲ್ಲಿ ಅನೇಕ ಕೃತಿಗಳು ರಚಿತವಾಗಿವೆ, 1862ರಲ್ಲಿ ಹುತೋಮ ಪೆಂಚಾರ್ ನಕ್ಷಾ ಎಂಬ ಕಾಳೀ ಪ್ರಸನ್ನ ಸಿಂಹನ ಕೃತಿ ಕಲ್ಕತ್ತದ ಆಡುಮಾತಿನಲ್ಲಿ ರಚಿತವಾಯಿತು. ರವೀಂದ್ರನಾಥರೂ ಸಹ ಇದನ್ನೆತ್ತಿಕೊಂಡರು. ಈಗ ಎರಡು ಶೈಲಿಗಳನ್ನೂ ಬಂಗಾಳಿಯಲ್ಲಿ ಎಡ್ಡಾತಡ್ಡಿಯಾಗಿ ಬಳಸಲಾಗುತ್ತಿದೆ; ಕಲ್ಕತ್ತೆಯ ಆಡುಭಾಷೆ ರಂಗಸ್ಥಳದಲ್ಲೂ ಸಿನಿಮಾದಲ್ಲೂ ರೇಡಿಯೋವಿನಲ್ಲೂ ಹೆಚ್ಚಾಗಿ ಕೇಳಿ ಬರುತ್ತಿದೆ. ಸ್ವಲ್ಪ ಕಾಲದತನಕ, ವಾಸ್ತವತೆಯ ನಗ್ನ ಚಿತ್ರಣವೇ. ಅದರಲ್ಲೂ ಕಾಮವಿಕಾರದ ಪ್ರದರ್ಶನವೇ ಪ್ರಚುರವಾಗಿತ್ತು.

ಇದರ ಹಿಂದೆಯೇ ಸಮಾಜ ಸ್ವಾಮ್ಯವಾದ ಮತ್ತು ಸಮತಾವಾದಗಳನ್ನು ಒತ್ತಿಹೇಳುವ ಬರಹಗಳ ಕೆಲವು ವೇಳೆ ನೈಜ ಭಾವನೆಯಿಂದ ಪ್ರೇರಿತವಾಗಿಯೂ ಅನೇಕ ವೇಳೆ ಇದೊಂದು ಬರಹದ ಸೊಗಸುಗಾರಿಕೆಯ ಮಾದರಿ ಎಂಬಂತೆಯೂ ಬಂದುವು. ಕೆಲವು ಶಕ್ತಿಯುತವಾದ ಕಾದಂಬರಿಗಳೂ ಪ್ರಕಟವಾದುವು. ಆದರೆ ಈ ಕೃತಿಗಳಲ್ಲಿ ಬಹುಭಾಗ ರಾಷ್ಟ್ರೀಯ ಸಂಸ್ಕøತಿಯನ್ನು ಅವಲಂಬಿಸದೆ ರಷ್ಯದ ಮೇಲೆ ಒರಗಿ ಕೊಂಡಿರುವ ಅಲ್ಪಾಯುಷಿಗಳು.				
(ಎಸ್.ಕೆ.ಸಿ.)

ಇಪ್ಪತ್ತನೆಯ ಶತಮಾನ: ಈ ಶತಮಾನದ ಮೊತ್ತಮೊದಲು ಕೃತಿ ರವೀಂದ್ರನಾಥ ಠಾಕೂರರ ನೈವೇದ್ಯ. ಇದು ನೂರು ಕವಿತೆಗಳ ಸಂಗ್ರಹ. ಅನಂತರದ ಕವಿತೆಗಳು ಕವಿಗೆ ಪ್ರಪಂಚಗೌರವ ದೊರಕಿಸಿಕೊಟ್ಟವು. ಪ್ರಪಂಚ ಸಾಹಿತ್ಯದಲ್ಲಿ ಅವರ ಗೀತಾಂಜಲಿ ಕೃತಿಗೆ ಅನನ್ಯ ಸ್ಥಾನವಿದೆ. ಸ್ವದೇಶಿ ಚಳವಳಿಯಲ್ಲಿ ರವೀಂದ್ರರು ವಹಿಸಿದ ಮುಖ್ಯಪಾತ್ರದಿಂದ ಅನೇಕರು ಒಟ್ಟಾದರು. ಅವರ ಸಮಕಾಲೀನ ಕವಿಗಳಲ್ಲಿ ದೇವೇಂದ್ರನಾಥಸೇನ್, ಅಕ್ಷೋಯಕುಮಾರ್ ಬರಾಲ್ ಮತ್ತು ದ್ವಿಜೇಂದ್ರ ಲಾಲ್ ರಾಯ್ ಮುಖ್ಯರು. ರವೀಂದ್ರರ ಪ್ರಭಾವವನ್ನೊಳಗೊಂಡ ಸತ್ಯೇಂದ್ರನಾಥ ದತ್ತ ಸೂಕ್ಷ್ಮ ಸಂವೇದಗಳಿಂದಲೂ, ವಿಶಿಷ್ಟ ಭಾಷಾಪ್ರಭುತ್ವ ಹಾಗೂ ಲಲಿತ ರಚನೆಗಳಿಂದ ಜನರ ಹೃದಯವನ್ನು ಸೂರೆಗೊಂಡರೆ, ಕರುಣಾನಿಧಾನ್ ಬ್ಯಾನರ್ಜಿ ಪ್ರಕೃತಿ ಪ್ರೇಮ ಮತ್ತು ಗತಕಾಲದ ಸುಮಧುರ ಸ್ಮøತಿಗೂ, ಜತೀಂದ್ರನಾಥ ಸೇನ್‍ಗುಪ್ತಾ ಮತ್ತು ಮೋಹಿತ್ ಲಾಲ್ ಮಜುಂದರ್ ಅವರು ಬೌದ್ಧಿಕ ಅಶುಭ ಪ್ರತೀಕ್ಷೆಗೆ ಹೆಸರುವಾಸಿಯಾಗಿದ್ದರು ಎನ್ನಲಾಗಿದೆ.

ರವೀಂದ್ರರ ಪೂರ್ವದ ಅನುಯಾಯಿಗಳ ಪೈಕಿ ಕಥಾಕ್ಷೇತ್ರದಲ್ಲಿ ಜನಪ್ರಿಯರಾಗಿದ್ದ ಲೇಖಕರೆಂದರೆ, ಪ್ರಭಾತ್ ಕುಮಾರ್ ಬ್ಯಾನರ್ಜಿ, ಚಾರುಚಂದ್ರ ಬ್ಯಾನರ್ಜಿ, ಮತ್ತು ಶೌರೀಂದ್ರ ಮೋಹನ ಮುಖರ್ಜಿ ಅವರು, ಪ್ರಭಾತ್ ಕುಮಾರ್ ಬ್ಯಾನರ್ಜಿಯವರ ಹಾಸ್ಯ ಕತೆಗಳು ಇಂದಿಗೂ ಕಥಾಸಾಹಿತ್ಯದಲ್ಲಿ ತಮ್ಮ ಮೌಲ್ಯ ಉಳಿಸಿಕೊಂಡಿವೆ. ರವೀಂದ್ರರ ಮಾನವಪ್ರೇಮ ಮತ್ತು ಕಲೆಯಿಂದ ಪ್ರೇರಿತನಾದ ಶರಶ್ಚಂದ್ರ ಚಟರ್ಜಿ ಬಂಗಾಳೀ ಸಾಹಿತ್ಯದಲ್ಲಿಯ ಒಂದು ಧ್ರುವತಾರೆ. ಹತ್ತೊಂಬತ್ತನೆಯ ಶತಮಾನದ ಕೊನೆಯ ವೇಳೆಗೆ ಸಾಹಿತ್ಯ ಕೃಷಿ ಕೈಗೊಂಡ ಈತ ಗಳಿಸಿದ ಕೀರ್ತಿ, ಯಶಸ್ಸು ಅಪಾರ. 1938ರಲ್ಲಿ ಈತ ನಿಧನಹೊಂದಿದ. ಅನಂತರ ಹೆಸರಿಸಬಹುದಾದ ಮತ್ತೊಬ್ಬ ಕಾದಂಬರಿಕಾರ ನರೇಶ ಚಂದ್ರಸೇನಗುಪ್ತ. ಇವನೊಬ್ಬ ನ್ಯಾಯವಾದಿ, ವಾಸ್ತವತಾವಾದಿ. ಹಾಗಾಗಿ ಈತನ ಕಾದಂಬರಿಯಲ್ಲಿ ಲೌಕಿಕ ವಿಷಯ ಜ್ಞಾನಗಳು ನೈಜತೆಯಿಂದ ಪ್ರಕಟಗೊಳ್ಳುತ್ತಿದ್ದವು. ಬಂಗಾಳೀ ಸಾಹಿತ್ಯದಲ್ಲಿ ರಾಗೋದ್ರೇಕವುಳ್ಳ ಸಣ್ಣ ಕಥೆಗಳನ್ನು ಬರೆದು ಯಶಸ್ವಿಯಾದವರೆಂದರೆ ಕಾಜಿ ನಜರುಲ್ ಇಸ್ಲಾಮ್ (ಜನನ 1899). ಈತ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು 1919ರಲ್ಲಿ. ಈತನ ಬಳಿಕ ಜಾಸಿಮುದ್ದೀನ್ ಎಂಬುವನ್ನು ಜನಪದ ಕವಿ ಎಂಬ ಪ್ರಶಂಸೆಗೆ ಪಾತ್ರನಾದ. ಈತನ ಕವನಗಳು ಜನಪದ ಶೈಲಿಯಿಂದ ಬಹುಜನರ ಮೆಚ್ಚುಗೆಗೆ ಪಾತ್ರವಾದವು.

ಬಂಗಾಳೀ ಸಾಹಿತ್ಯದ ಆಧುನಿಕ ಚಳವಳಿಯ ಮುಖ್ಯ ಸಾಧನ ಕಲ್ಲೋಲ ಎಂಬ ಪತ್ರಿಕೆ. ಇದನ್ನು 1923ರಲ್ಲಿ ಗೋಕುಲ ಚಂದ್ರನಾಗ ಮತ್ತು ದಿನೇಶರಂಜನ ದಾಸ ಎಂಬುವರು ಆರಂಭಿಸಿ, ಹೊಸ ಬರಹಗಾರರ ಸಾಹಿತ್ಯ ಕೃಷಿಗೆ ಅವಕಾಶ ಸಾಹಿತ್ಯದ ಆಧುನಿಕ ಕವಿಗಳಲ್ಲಿ ಅನೇಕರು ಆದ್ಯಕಾಲದ ಅಂಟುಜಾಡ್ಯದ ಪ್ರತಿನಿಧಿಗಳಾಗಿದ್ದಾರೆ ಎಂಬುದು ಕಾಜಿ ಅಬ್ದುಲ್‍ವಾದುದ್ ಅವರ ಅಭಿಪ್ರಾಯ. ಶರಶ್ಚಂದ್ರನ ಅನಂತರ ಬಂಗಾಳೀ ಕಥೆ ಕಾದಂಬರಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದವರೆಂದರೆ ಬಿಭೂತಿ ಭೂಷಣ ಬ್ಯಾನರ್ಜಿ (1899-1950). ಪಾಥೇರ್ ಪಾಂಚಾಲಿ (1929) ಇವರ ಪ್ರಸಿದ್ಧ ಕೃತಿ. ಇದು ಚಲನಚಿತ್ರ ರೂಪದಲ್ಲೂ ಖ್ಯಾತಿ ಪಡೆದಿದೆ. ಬಿಭೂತಿ ಭೂಷಣ ಬ್ಯಾನರ್ಜಿ ಪ್ರಕೃತಿಪ್ರೇಮಿ ಗ್ರಾಮ ಜೀವನ ಈತನಿಗೆ ಅಚ್ಚುಮೆಚ್ಚು. ಬಂಗಾಳೀ ಸಾಹಿತ್ಯ ಚರಿತ್ರೆಕಾರರು, ಶರಶ್ಚಂದ್ರನ ಅನಂತರ ಬಂದ ಲೇಖಕರನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದಾರೆ. ರವೀಂದ್ರನಾಥ ಮತ್ತು ಶರಶ್ಚಂದ್ರರ ಸಾಹಿತ್ಯದ ಜಾಡನ್ನು ಅನುಸರಿಸಿದವರು; ಕಾವ್ಯಕ್ಷೇತ್ರದಲ್ಲಿ ಪೂರ್ಣವಾಗಿ ಕಥಾಕ್ಷೇತ್ರದಲ್ಲಿ ವಿರಳವಾಗಿ ಅತ್ಯಾಧುನಿಕ ಧೋರಣೆ ವ್ಯಕ್ತಪಡಿಸುವವರು; ಮತ್ತು ವಾಮ ಪಂಥಕ್ಕೆ ಸೇರಿದವರು ಮೊದಲನೆಯ ವರ್ಗದ ಲೇಖಕರಲ್ಲಿ ಹೆಸರಿಸಬಹುದಾದವರು; ಶೈಲಜಾನಂದ ಮುಖರ್ಜಿ (ಜನನ 1900). ಇವನ ಪ್ರಸಿದ್ಧ ಕಥಾಕೃತಿ ಆಮೇರ ಮಂಜರಿ (1923) ಪ್ರೇಮೇಂದ್ರಮಿತ್ರ (ಜನನ 1904). ಈತನ ಕೃತಿಗಳು ಪಂಚಶರ್ (1929), ಬೇನಾಮಿ ಬಂದರ್ (1930), ಮೈತ್ರಿಕಾ (1932) ಮುಂತಾದವು. ಅನ್ನದಾ ಶಂಕರ್ ರೇ (ಜನನ 1904), ಮಹಬೂಬಲ್ ಆಲಾಂ (ಚಿಟ್ಟಗಾಂಗಿನವ), ಬನಪೂಲ್ ತಾರಾಶಂಕರ ಬಂದೋಪಾಧ್ಯಾಯ (1910-1971), ಇವರ ಗಾನ ದೇವತಾ ಕಾದಂಬರಿಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. 1956ರಲ್ಲಿ ಇವರ ಆರೋಗ್ಯ ನಿಕೇತನ್ ಎಂಬ ಕಾದಂಬರಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ. ಬಿಷ್ಣು ದೇ (1909-1976) ಜ್ಞಾನಪೀಠ ಪ್ರಶಸ್ತಿ ಪಡೆದ ಮತ್ತೊಬ್ಬರು. ಇವರ ಸ್ಮøತಿ-ಸತ್ತಾ-ಭವಿಷ್ಯತ್ ಎಂಬ ಕವನ ಸಂಕಲನಕ್ಕೆ ಈ ಪ್ರಶಸ್ತಿ ಲಭಿಸಿದೆ. ಇದೇ ಕೃತಿಗೆ 1965ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ ದೊರಕಿದೆ. ಕಾವ್ಯದಲ್ಲಿ ನೈಜತೆಯನ್ನು ನೆಲೆಗೊಳಿಸಿ ಸಮಕಾಲೀನ ಬದುಕನ್ನು ರೂಪಿಸಿ ಕೊಟ್ಟವರಲ್ಲಿ ಇವರು ಅಗ್ರಗಣ್ಯರು. ಇವರಲ್ಲದೆ ಸುಭೋಧ್ ಘೋಷ್, ನಾರಾಯಣ ಗಂಗೋಪಾಧ್ಯಾಯ ಸತಿನಾಥ್ ಭದೂರಿ ಮುಂತಾದವರು ಅನೇಕ ಸಾಹಿತ್ಯಿಕ ಕೃತಿಗಳನ್ನು ರಚಿಸಿ ಸಾರ್ಥಕರಾಗಿದ್ದಾರೆ. ಮಹಬೂಬಲ್ ಅಲಾಂನ ಉತ್ತಮ ಕೃತಿ ಮೊಮೆನೇರ್ ಜಬನ್ ಬಂದಿ (ಮತನಿಷ್ಠನ ತಪ್ಪೊಪ್ಪಿಗೆಗಳು). ಜೀವನದ ನೈಜಕಂಪನ್ನು ತನ್ನ ಸಾಹಿತ್ಯ ಕೃತಿಗಳಲ್ಲಿ ತಂದಿದ್ದಾನೆ. ಅನ್ನದಾ ಶಂಕರ ರೇ ಎಂಬಾತನ ಸಣ್ಣಕತೆಗಳ ಸಂಗ್ರಹ ಮೋನ್-ಪಬನ್ ಒಂದು ವಿಶಿಷ್ಟಕೃತಿ. ಇದರಲ್ಲಿ ವ್ಯಕ್ತಿಚಿತ್ರಗಳನ್ನು ಸೂಕ್ಷ್ಮವಾಗಿ ಬಿಡಿಸಿದ್ದಾನೆ. ಇತ್ತೀಚಿನ ಶ್ರೇಷ್ಠ ಕಾದಂಬರಿಕಾರರಲ್ಲಿ ಶಂಕರ ಬಂದೋಪಾಧ್ಯಾಯ ತುಂಬ ಜನಪ್ರಿಯನಾಗಿರುವ ಲೇಖಕ. ಪ್ರಾದೇಶಿಕ ಜನಜೀವನವನ್ನು ಚಿತ್ರಿಸುವುದರಲ್ಲಿ ಆತನದು ಸಿದ್ಧಹಸ್ತ. ರವೀಂದ್ರ, ಶರಶ್ಚಂದ್ರರ ಅನಂತರ ಸಣ್ಣಕಥೆ ಪ್ರಕಾರದಲ್ಲಿ ಶ್ರೇಷ್ಠ ಕತೆಗಾರನೆಂದು ಪರಿಗಣಿತನಾಗಿರುವ ಲೇಖನ ಪ್ರೇಮೇಂದ್ರನಾಥ. ವಾಮಪಕ್ಷದ ಮುಖಂಡನಾದ ಮಾಣಿಕ್ ವಂದ್ಯೋಪಾಧ್ಯಾಯ ಪುತಲ್ ನಾಚೇರ್ ಇತಿಕಥಾ (ಬೊಂಬೆಗಳ ಕುಣಿತ) ಎಂಬ ತನ್ನ ಪ್ರಸಿದ್ಧ ಕೃತಿಯಲ್ಲಿ ತಾನು ಜೀವನದಲ್ಲಿ ಎಲ್ಲ ಭ್ರಾಂತಿಗಳನ್ನು ತೊರೆದಿರುವ ನಿಪುಣ ಕಲೆಗಾರನೆಂಬುದನ್ನು ಸ್ಪಷ್ಟಪಡಿಸಿದ್ದಾನೆ. ಇವನ ಬಳಿಕ ಅಮರೇಂದ್ರ ಘೋಷ್ ಎಂಬುವನನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಏಕೆಂದರೆ ಈತನ ಚಾರ್‍ಕಷೆಮ್ ಎಂಬ ಕೃತಿ ಯೂರೋಪಿನ ಗ್ರೋತ್ ಆಫ್ ದಿ ಸಾಯಿಲ್ ಎಂಬ ಹೆಸರಾಂತ ಕೃತಿಯಂತೆ ಆಧುನಿಕ ಕಾಲದ ಒಂದು ಸ್ಮರಣೆಯ ಕೃತಿಯೆಂದು ಪ್ರಸಿದ್ಧಿ ಪಡೆದಿದೆ.

ಶಿಶುಸಾಹಿತ್ಯ ಪ್ರಕಾರದಲ್ಲಿ ಗಣನೀಯ ಕಾರ್ಯ ಮಾಡಿದವರೆಂದರೆ ಅಬನೀಂದ್ರನಾಥ ಠಾಕೂರ್, ಉಪೇಂದ್ರ ಕಿಶೋರ್ ರಾಯ್‍ಚೌಧುರಿ, ಸುಕುಮಾರರಾಯ್, ಸುಖಲತಾರಾವ್ ಮುಂತಾದವರು. ಆಧುನಿಕ ಬಂಗಾಳೀ ಸಾಹಿತ್ಯ ಕವಿತೆ, ಕಾವ್ಯ, ಕತೆ, ಕಾದಂಬರಿ ಪ್ರಕಾರಗಳಲ್ಲಿ ಶ್ರೀಮಂತವಾಗಿದೆಯಾದರೂ ನಾಟಕ ಪ್ರಕಾರದಲ್ಲಿ ಅದರ ಕೊಡುಗೆ ಗಮನಾರ್ಹವಾದುದೇನಲ್ಲ ಎಂದು ತಿಳಿದು ಬರುತ್ತದೆ. ಗಿರೀಶ ಚಂದ್ರಘೋಷ್ ಮತ್ತು ದ್ವಿಜೇಂದ್ರಲಾಲರಾಯಾ ಮುಂತಾದ ಹೆಸರಾಂತ ನಾಟಕಕಾರರು ಸಹ ಭಾವವೇಶದ ನಾಟಕಗಳಿಂದ ಬೇರೆಯಾಗಿಲ್ಲವೆಂದು ವಿಮರ್ಶಕರ ಅಭಿಪ್ರಾಯ, ಆದರೆ ರವೀಂದ್ರರ ನಾಟಕಗಳು ಉಲ್ಲೇಖಾರ್ಹವಾಗಿವೆ. ಅವರ ಕೆಲವು ನಾಟಕಗಳು ಹೆಸರು ಗಳಿಸಿ ಪ್ರಖ್ಯಾತವಾಗಿವೆ.

ನಾಟಕ ಪ್ರಕಾರದಂತೆಯೇ ಲಲಿತ ಪ್ರಬಂಧಗಳ ಪ್ರಕಾರವೂ ಉನ್ನತ ಮಟ್ಟ ಸಾಧಿಸಿಲ್ಲ. ಆದರೂ ಶಶಾಂಕ ಮೋಹನಸೇನ್, ಮೋಹಿತಲಾಲ್ ಮಜುಂದಾರ್, ಅನ್ನದಾ ಶಂಕರರೇ, ಹುಮಾಯೂನ್ ಕಬೀರ್, ಅಬುಸೈಯೀದ್ ಅಯುಬ್, ಬುದ್ಧ ದೇವ ಬೋಸ್ ಮುಂತಾದ ಮಹನೀಯರು ಈ ಕ್ಷೇತ್ರದಲ್ಲಿ ಕೃಷಿ ನಡೆಸಿದ್ದಾರೆ.

ಸರಸ ಸಾಹಿತ್ಯದಲ್ಲಿ ಸೈಯದ್ ಮುಸ್ತಾಬಾ ಅಲಿ ಮತ್ತು ಜಜಬರ್ ಎಂಬವರು ತಮ್ಮ ರಚನೆಗಳಿಂದ ಬಂಗಾಳೀ ಜನರ ಮನವನ್ನು ಸೂರೆಗೊಂಡಿದ್ದಾರೆ.

ಬಂಗಾಳೀ ಸಾಹಿತ್ಯದಲ್ಲಿ ಭಾಷಾಂತಾರ ಕೃತಿಗಳ ಸಂಖ್ಯೆ ಕಡಿಮೆ, ಪ್ರಪಂಚದ ಪ್ರಸಿದ್ಧ ಕೃತಿಗಳ ಅನುವಾದ ಕಾರ್ಯವನ್ನು ಕೆಲವು ತರುಣ ಬರಹಗಾರರು ಬಹಳ ಶ್ರದ್ಧೆಯಿಂದ ಕೈಗೊಂಡಿದ್ದಾರೆ. ಅವರ ಪರಿಶ್ರಮದ ಫಲವಾಗಿ ಅನ್ಯಭಾಷಾಸಾಹಿತ್ಯ ಪರಿಚಯ ಅಲ್ಲಿನ ಓದುಗರಿಗೆ ಲಭಿಸುತ್ತದೆ; ಇದಲ್ಲದೆ ಅನೇಕ ಶಾಸ್ತ್ರಗ್ರಂಥಗಳು, ವಿಜ್ಞಾನ ಕೃತಿಗಳು ಮಾನವಿಕ ಗ್ರಂಥಗಳನ್ನು ಬರೆಯಲು ಲೇಖಕರಿಗೆ ವಿಶೇಷವಾದ ಪ್ರೋತ್ಸಾಹ ನೀಡಲಾಗುತ್ತಿದೆ.

ಬಂಗಾಳೀ ಸಾಹಿತ್ಯಕ್ಕೆ ಮಹಿಳಾ ಲೇಖಕಿಯರ ಕೊಡುಗೆ ಕಡಿಮೆಯೇನಲ್ಲ. ಅನೇಕ ಉತ್ಕøಷ್ಟ ಕೃತಿಗಳನ್ನವರು ರಚಿಸಿ, ಕೀರ್ತಿ ಪಡೆದಿರುವವರೂ ಉಂಟು. ಸ್ವರ್ಣ ಕುಮಾರಿ ದೇವಿ, ಗಿರೀಂದ್ರಮೋಹಿನಿದಾಸಿ, ಕಾಮಿನೀ ರೇ, ಪ್ರಿಯಂವದಾದೇವಿ, ಬೇಗಂ ರೋಕೆಯ, ನಿರುಪಮಾದೇವಿ, ಅನುರೂಪಾದೇವಿ, ಲೀಲಾ ಮಜಂದಾರ್, ಮೈತ್ರೀಯಿ ದೇವಿ, ಪ್ರತಿಭಾ ಬೋಸ್, ಪ್ರಭಾವತಿ ದೇವಿ, ಬೇಗಂ ಶಾಂಸ್-ಉನ್-ನಹರ್, ರಾಧಾರಾಣಿದೇವಿ, ಬೇಗಂ ಸೂಫಿಯಾ ಕಮಾಲ್, ವಾಣೀರಾಯ್, ಆಶಾಪೂರ್ಣದೇವಿ-ಮುಂತಾದವರು. ಅವರ ಪೈಕಿ ಕಾದಂಬರಿಕಾರ್ತಿ ಆಶಾಪೂರ್ಣದೇವಿಯವರ (1909-) ಹೆಸರನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಇವರು ಜ್ಞಾನಪೀಠ ಪ್ರಶಸ್ತಿ ವಿಜೇತರೂ ಹೌದು. ಈ ಪ್ರಶಸ್ತಿ ಪಡೆದ ಬಂಗಾಳಿ ಲೇಖಕರಲ್ಲಿ ಮೂರನೆಯವರು. 1960-69ರ ನಡುವೆ ರಚಿತವಾದ ಕೃತಿಗಳಲ್ಲಿ ಶ್ರೇಷ್ಠವೆಂದು ಪರಿಗಣಿತವಾದ ಒಂದು ಶತಮಾನದ ಮೂರು ತಲೆಮಾರುಗಳ ಸ್ತ್ರೀಯರ ಜೀವನ ಚಿತ್ರಿಸುವ ಮೂರು ಕಾದಂಬರಿಗಳಲ್ಲಿ ಮೊದಲನೆಯದಾದ ಪ್ರಥಮ ಪ್ರತಿಶ್ರುತಿಗೆ ಈ ಪ್ರಶಸ್ತಿ ಲಭಿಸಿದೆ. ಇದರ ಮುಂದಿನ ಭಾಗಗಳು ಸುವರ್ಣಲತಾ ಹಾಗೂ ಬಕುಲಕಥಾ. ಇವರು 160ಕ್ಕೂ ಹೆಚ್ಚಿನ ಕಾದಂಬರಿ ಹಾಗೂ 20 ಸಣ್ಣಕಥೆಗಳ ಸಂಕಲನ ಪ್ರಕಟಿಸಿದ್ದಾರೆ. ಇವರ 17 ಕಥೆಗಳು ಚಲನಚಿತ್ರಗಳಾಗಿವೆ. ಬಂಗಾಳಿಯಲ್ಲಿ ಸಿದ್ಧವಾದ ಪ್ರಥಮ ಪ್ರತಿಶ್ರುತಿ ಮತ್ತು ಅಗ್ನಿ ಪರೀಕ್ಷಾ, ಹಿಂದಿಯಲ್ಲಿ ತಯಾರಾದ ಛೋಟೀಸಿ ಮುಲಾಕತ್ ಚಿತ್ರಗಳನ್ನು ಹೆಸರಿಸಬಹುದು.

	ಜೀವನಾನಂದ ದಾಸ್ (ಶ್ರೇಷ್ಠ ಕವಿತಾ-1955); ಪ್ರೇಮೇಂದ್ರ ಮಿತ್ರ (ಸಾಗರ್ ಥೇ ಕೇ ಫೇರ-1957); ಪರಶುರಾಮ್ (ಆನಂದೀಬಾಯ್-1958); ಗಜೇಂದ್ರ ಕುಮಾರ್ ಮಿತ್ರ (ಕಲ್ಕತರ್-1959); ಶಶಿಭೂಷಣ ದಾಸ ಗುಪ್ತ (ಭರತೇರ್ ಶಕ್ತಿಸಾಧನ ಓ ಶಕ್ತಿ ಸಾಹಿತ್ಯ-1961); ಅಮಿಯಾ ಚಕ್ರವರ್ತಿ (ಘರೇ ಫೆರತ್ ದಿನ್-1963) ಸುಭಾಸ್ ಮುಖ್ಯೋಪಾಧ್ಯಾಯ (ಲಮತ ದುರೈ ಜೈ-1964); ಮನೋಜಬಸು (ನಿಸಿಕುತುಬಮ್-1966); ಮಣೀಂದ್ರ ರೇ (ಮೋಹಿನಿ ಅತಲ್-1969)-ಮುಂತಾದವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಸಿದ್ದಾರೆ.

	ಆಲ್ಲದೆ, ರಾಷ್ಟ್ರಭಾರತಿ ಗ್ರಂಥಮಾಲೆಯವರು ಆಶಾಪೂರ್ಣದೇವಿ. ಬನಿರಾಯ್, ಬಿಷ್ಣು ದೇ, ಬುದ್ಧದೇವ ಬೋಸ್, ದೇವೇಶದಾಸ್, ಧನಂಜಯ ಬೈರಾಗಿ, ಪರುಶರಾಮ್, ಪ್ರಬೋಧ ಕುಮಾರ್ ಸನ್ಯಾಲ್, ಪ್ರಮಥನಾಥ ಬಿಷಿ, ರವೀಂದ್ರನಾಥ ಠಾಕೂರ್, ಸುಭಾಷ್ ಚಂದ್ರ ಬೋಸ್, ತಸನ್ ಮೋಹನ ಚಟರ್ಜಿ, ತಾರಾಶಂಕರ ಬಂದ್ಯೋಪಾಧ್ಯಾಯ, ವಿವೇಕರಾಜನ್ ಭಟ್ಟಾಚಾರ್ಯ, ವಿಮಲಾಕಾಂತ್ ರಾಯ್ ಚೌಧರಿ ಇವರ ಶ್ರೇಷ್ಠ ಕೃತಿಗಳನ್ನು ಹಿಂದೀ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾರೆ.

	ಪಾಶ್ಚಾತ್ಯ ಕೃತಿಗಳ ಪ್ರಭಾವದಿಂದಲೂ ಬಂಗಾಳೀ ಭಾಷೆ ಮತ್ತು ಸಾಹಿತ್ಯಕ್ಕೆ ಹೊಸ ಚೈತನ್ಯ ಮೂಡಿದೆ. ಇಂದಿನ ದಿನಗಳಲ್ಲಿ ಹಲವಾರು ಲೇಖಕರು ಬಂಗಾಳೀ ಸಾಹಿತ್ಯಕ್ಕೆ ಉಜ್ಜ್ವಲ ಕೊಡುಗೆಯನ್ನಿತ್ತಿದ್ದಾರೆ. ಅನ್ಯಭಾಷಾ ಸಾಹಿತ್ಯ ಪ್ರಭಾವಗಳಿಂದ ಬಂಗಾಳೀ ಭಾಷೆ ಮತ್ತು ಸಾಹಿತ್ಯ ಸಂಕೀರ್ಣತೆಯನ್ನು ಸಾಧಿಸಿದೆಯಲ್ಲದೆ ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ